(ನ್ಯೂಸ್ ಕಡಬ) newskadaba.com ಡಿ. 20: ಮಂಡ್ಯ: ಕನ್ನಡ ಭಾಷೆಯು ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ , ನಾಡೋಜ ಡಾ. ಮಹೇಶ ಜೋಶಿ ಬೇಸರ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಶುಕ್ರವಾರದಿಂದ ಆರಂಭವಾದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಇಂತಹ ವೇದಿಕೆಗಳ ಮುಖೇನ ಕನ್ನಡ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು. ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ನಿರಾಸಕ್ತಿ ಹೆಚ್ಚಾಗಿ ಕನ್ನಡ ಭಾಷೆಯಿಂದ ವಿಮುಖರಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಇದಕ್ಕೆ ಮಕ್ಕಳು ಮಾತ್ರ ಹೊಣೆಗಾರರಲ್ಲ, ಮಕ್ಕಳ ಪೋಷಕರೂ ಹೊಣೆಗಾರರು ಎಂದು ಸೂಚ್ಯವಾಗಿ ತಿಳಿಸಿದರು.
ಕನ್ನಡ ಭಾಷೆ ಕೇವಲ ಅನ್ನದ ಭಾಷೆಯಲ್ಲ, ಈ ನೆಲದ ಅಸ್ಮಿತೆ. ಈ ಭಾಷೆಗೆ ತನ್ನದೇ ಆದ ಗಟ್ಟಿತನ ಇದೆ. ಸಾಂಸ್ಕೃತಿಕ ವೈಭವ ಇದೆ. ಆ ಕಾರಣಕ್ಕಾಗಿ ಎಲ್ಲರೂ ಈ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.
ಇದು ಕೇವಲ ಸಮ್ಮೇಳನ ಮಾತ್ರವಲ್ಲ, ಸಾಂಸ್ಕೃತಿಕ ಜಾತ್ರೆ. ಈ ನೆಲದ ಇತಿಹಾಸ, ಪರಂಪರೆ ಸಾರುವ ಜಾತ್ರೆ. ಇಂತಹ ಜಾತ್ರೆ ಸದಾ ಚಲನೆಯಲ್ಲಿರಬೇಕು ಎಂದು ಆಶಿಸಿದರು.