(ನ್ಯೂಸ್ ಕಡಬ) newskadaba.com ಡಿ. 12. 2027ರ ಆವೃತ್ತಿಯ ಫಿಫಾ ಮಹಿಳೆಯರ ವಿಶ್ವಕಪ್ ಟೂರ್ನಿಯು ಜೂನ್ 24 ಹಾಗೂ ಜುಲೈ 25ರ ನಡುವೆ ಬ್ರೆಝಿಲ್ ನಲ್ಲಿ ನಡೆಯಲಿದೆ ಎಂದು ಜಾಗತಿಕ ಆಡಳಿತ ಮಂಡಳಿ ಫಿಫಾ ತಿಳಿಸಿದೆ.
32 ತಂಡಗಳು ಭಾಗವಹಿಸುವ ಈ ಪಂದ್ಯಾವಳಿಯಲ್ಲಿ ಯುರೋಪ್ ಆಡಳಿತ ಮಂಡಳಿ ಯುಇಎಫ್‌ಎನಿಂದ 11 ತಂಡಗಳು ನೇರವಾಗಿ ಅರ್ಹತೆ ಪಡೆದಿವೆ. ಏಶ್ಯಾದ ಎಎಫ್‌ಸಿಯಿಂದ 6 ತಂಡಗಳು, ಆಫ್ರಿಕಾದ ಸಿಎಎಫ್ ಹಾಗೂ ಉತ್ತರ ಅಮೆರಿಕದ ತಲಾ 4 ತಂಡಗಳು ನೇರ ಪ್ರವೇಶ ಪಡೆದಿವೆ. ದಕ್ಷಿಣ ಅಮೆರಿಕದಿಂದ 3 ಹಾಗೂ ಒಶಿಯಾನಿಯಾ ಒಎಫ್‌ಸಿಯಿಂದ ಒಂದು ತಂಡ ಅರ್ಹತೆ ಪಡೆದಿದೆ. ಉಳಿದ 3 ಸ್ಥಾನಗಳು 10 ತಂಡಗಳ ಪ್ಲೇ- ಆಫ್ ಟೂರ್ನಿಯ ಮೂಲಕ ನಿರ್ಣಯಿಸಲಾಗುತ್ತದೆ. ಈ ಟೂರ್ನಿಯನ್ನು 2026ರ ನವೆಂಬರ್ ಹಾಗೂ 2027ರ ಫೆಬ್ರವರಿ ನಡುವೆ 2 ಹಂತದಲ್ಲಿ ಆಡಲಾಗುತ್ತದೆ. ಮೇ ತಿಂಗಳಿನಲ್ಲಿ ಆತಿಥ್ಯದ ಹಕ್ಕನ್ನು ಗೆದ್ದಿರುವ ಬ್ರೆಝಿಲ್ ದೇಶವು 10ರಿಂದ 12 ತಾಣಗಳಲ್ಲಿ ಟೂರ್ನಿಯನ್ನು ಆಯೋಜಿಸಲಿದೆ. 2014ರ ಪುರುಷರ ವಿಶ್ವಕಪ್ ತಾಣಗಳನ್ನು ಬಳಸಲಾಗುತ್ತದೆ.