(ನ್ಯೂಸ್ ಕಡಬ) newskadaba.com ಡಿ. 12. ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಬೆಳಗಾವಿ ಸುವರ್ಣಸೌಧದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಅವರ ಕುತಂತ್ರದಿಂದ ಲಾಠಿ ಚಾರ್ಜ್ ಮಾಡಲಾಗಿದೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣ ವಚನ ಹೇಳುವ ಸಿದ್ದರಾಮಯ್ಯ ಬಸವಣ್ಣ ಅವರ ಅನುಯಾಯಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ವ್ಯವಸ್ಥಿತವಾಗಿ ಗಲಭೆ ಮಾಡಲು, ಶಾಂತಿ ಕದಡಲು ಕುತಂತ್ರ ಮಾಡಿ ಈ ಲಾಠಿ ಚಾರ್ಜ್ ಮಾಡಲಾಗಿದೆ. ಕೂಡಲೇ ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮುದಾಯದ ಕ್ಷಮೆ ಕೇಳಬೇಕು. ಲಾಠಿ ಚಾರ್ಜ್ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಘಟನೆಗೆ ಸಂಬಂಧಿಸಿ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಶಾಸಕರಾದ ಸುನಿಲ್ ಕುಮಾರ್, ಅಶ್ವತ್ಥ ನಾರಾಯಣ, ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಮತ್ತಿತರು ಭಾಗಿಯಾಗಿದ್ದರು.