(ನ್ಯೂಸ್ ಕಡಬ) newskadaba.com ಡಿ. 04 ಬೀದರ್: ಮೈಸೂರು ‘ಮುಡಾ’ ಹಗರಣದ ವಿಷಯ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಮುಖ್ಯಮಂತ್ರಿಯವರು ಹಗರಣ ಆಗಿಲ್ಲ; ಅಕ್ರಮ ನಡೆದಿಲ್ಲ ಎಂದಿದ್ದರು. ನಮ್ಮ ಪಾದಯಾತ್ರೆ ಬಳಿಕ ಸಿಎಂ ಸ್ಥಾನಕ್ಕೆ ಕುತ್ತು ಬರುವ ಭಯದಿಂದ 14 ನಿವೇಶನ ವಾಪಸ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬೀದರ್‍ನಲ್ಲಿ ಇಂದು ವಕ್ಫ್ ಸಂಬಂಧಿತ ಹೋರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಡಾದಲ್ಲಿನ ತಮ್ಮ ಪತ್ನಿಯ 14 ನಿವೇಶನ ವಾಪಸ್ ಕೊಡಲು 62 ಕೋಟಿ ಕೊಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದರು. ಬಿಜೆಪಿ ಹೋರಾಟದ ಫಲವಾಗಿ ಒಂದು ರೂಪಾಯಿ ಪಡೆಯದೆ ಅಕ್ರಮ ಸೈಟ್‍ಗಳನ್ನು ವಾಪಸ್ ಕೊಡಲು ಸಿಎಂ ಪತ್ನಿ ಪತ್ರ ಬರೆದಿದ್ದಾರೆ ಎಂದರಲ್ಲದೆ, ಭ್ರಷ್ಟ, ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತ ಬಂದಿದ್ದು, ಜನರಿಗೆ ನ್ಯಾಯ ಕೊಡಲು ಮುಂದಾಗಿದ್ದೇವೆ ಎಂದರು. ರೈತರು ವಕ್ಫ್ ಕಾಯ್ದೆಯಿಂದ ಆತಂಕ ಪಡಬೇಕಿಲ್ಲ; ಬಿಜೆಪಿ ನಿಮ್ಮ ಪರವಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಕೊಡಲಾಗುವುದು ಎಂದು ಪ್ರಕಟಿಸಿದರು. ನಮ್ಮ ಭೂಮಿ ನಮ್ಮ ಹಕ್ಕು ಎಂದು ತಿಳಿಸಿದರು.