(ನ್ಯೂಸ್ ಕಡಬ) newskadaba.com ಡಿ. 03 ಬೆಂಗಳೂರು: ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ 1924ರಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ “ಗಾಂಧಿ ಭಾರತ” ಹೆಸರಲ್ಲಿ ವರ್ಷವಿಡೀ ಅರ್ಥಪೂರ್ಣ ಕಾರ್ಯಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಆಚರಣೆ ಜಗತ್ತಿಗೆ ಗಾಂಧಿ ಸಂದೇಶ ಸಾರುವಂತಿರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ ರಾಜ್ಯದ 120 ಸ್ಥಳಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಯೋಜಿಸಿದೆ. ಜೊತೆಗೆ ರಿಚರ್ಡ್ ಅಟೆನ್‌ಬರೋ ಅವರ ಗಾಂಧಿ ಸಿನಿಮಾ ಕೂಡ ಕನ್ನಡದಲ್ಲಿ ನಿರ್ಮಾಣವಾಗಲಿದೆ. ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಅಧಿವೇಶನ, ಸ್ವಾತಂತ್ರ್ಯ ಚಳವಳಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ಡಿ.26 ರಂದು ಗಣ್ಯ ಪ್ರತಿನಿಧಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡಿ.27 ರಂದು ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು ಮತ್ತು ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ನಗರದ ಪ್ರಮುಖ 32 ಕಿಮೀ ಉದ್ದದ ರಸ್ತೆ ಹಾಗೂ 30 ವೃತ್ತಗಳ ದೀಪಾಲಂಕಾರ ಮಾಡಲಾಗುವುದು.