(ನ್ಯೂಸ್ ಕಡಬ) newskadaba.com ನ. 29. ಬಳ್ಳಾರಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇಡೀ ಅನಾಹುತಕ್ಕೆ ಗ್ಲೂಕೋಸ್ ಸಹಿತ ಇಂಟ್ರಾವೀನಸ್ ದ್ರಾವಣ ಕಾರಣ ಅನ್ನೋ ವರದಿ ಬಹಿರಂಗವಾಗಿದೆ.
ಬಾಣಂತಿಯರ ಸರಣಿ ಸಾವಿನ ಕುರಿತು ತನಿಖೆ ನಡೆಸಲು ನೇಮಕವಾಗಿದ್ದ ತಂಡ ವರದಿಯೊಂದನ್ನು ನೀಡಿದ್ದು, ಹೆರಿಗೆಯಾಗುವ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ವೇಳೆ ನೀಡಿದ ದ್ರಾವಣ ಕಳಪೆಯಾಗಿತ್ತು ಎಂಬ ವರದಿ ನೀಡಿದೆ ಎಂದು ತಿಳಿದು ಬಂದಿದೆ. ದ್ರಾವಣದ ಬಗ್ಗೆ ದೂರು ಬಂದಿರುವುದರಿಂದ ಇಂಟ್ರಾವೀನಸ್ ದ್ರಾವಣ ಬಳಕೆ ಮಾಡದಂತೆ ಈಗಾಗಲೇ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಗ್ಲೂಕೋಸ್ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿನ ಸಾವಿನ ಬಗ್ಗೆ ತನಿಖೆ ನಡೆಸಲು ಸರ್ಕಾರ ತಂಡ ಕಳುಹಿಸಿತ್ತು. ಇದೀಗ ಶಸ್ತ್ರ ಚಿಕಿತ್ಸೆ ವೇಳೆ ಈ ಕಳಪೆ ಐವಿ ದ್ರಾವಣದಿಂದ ದೇಹದಲ್ಲಿ ದಿಢೀರ್ ಬದಲಾವಣೆ, ಅಡ್ಡ ಪರಿಣಾಮಗಳಿಂದ ಸಾವಾಗಿದೆ ಎಂದು ತಂಡ ವರದಿ ಸಲ್ಲಿಕೆ ಮಾಡಿದೆ.