(ನ್ಯೂಸ್ ಕಡಬ) newskadaba.com ಮಂಗಳೂರು: , ನ. 28. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 36.66 ಕಿಮೀ. ಕರಾವಳಿ ಪ್ರದೇಶದಲ್ಲಿ 17.74 ಕಿಮೀ. ವ್ಯಾಪ್ತಿಯಲ್ಲಿ ಕಡೆಲ್ಕೊರೆತ ಸಂಭವಿಸುತ್ತಿರುವುದಾಗಿ ಕೇಂದ್ರ ಪರಿಸರ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಸಂಸತ್‌ನ ಚಳಿಗಾಲದ ಅಧಿವೇಶದಲ್ಲಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಚಿವರು, ದಕ್ಷಿಣ ಕನ್ನಡದ ಸಮುದ್ರ ತೀರ ತೆಗದುಕೊಂಡರೆ ಶೇ.48.4ರಷ್ಟು ಭಾಗದಲ್ಲಿ ಸಮುದ್ರ ಕೊರೆತ ಉಂಟಾಗುತ್ತಿದೆ. ಭಾರತೀಯ ರಾಷ್ಟ್ರೀಯ ಸಮುದ್ರ ಮಾಹಿತಿ ಹಾಗೂ ಸೇವಾ ಸೆಂಟರ್(ಐಎನ್‌ಸಿಒಇಎಸ್)1990ರಿಂದ 2018ರವರೆಗೆ ಸಂಗ್ರಹಿಸಿರುವ ಉಪಗ್ರಹ ಆಧಾರಿತ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ಕಡಲ್ಕೊರೆತ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ ಎಂದು ಮಾಹಿತಿ ನೀಡಿದ್ಧಾರೆ.