(ನ್ಯೂಸ್ ಕಡಬ) newskadaba.com ನ. 20. ಭದ್ರತಾ ಕಾರಣದಿಂದಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸರ್ಕಾರ ಅನುಮತಿ ನಿರಾಕರಿಸಿರುವುದರಿಂದ ಭಾರತ ಅಂಧರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಷ್ಟ್ರೀಯ ಫೆಡರೇಶನ್ ತಿಳಿಸಿದೆ. ನವೆಂಬರ್ 23 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ಭಾರತ ತಂಡವು ಇಂದು ವಾಘಾ ಗಡಿಯನ್ನು ದಾಟಬೇಕಿತ್ತು.
ತಂಡವು ಪಂದ್ಯಾವಳಿಯಲ್ಲಿ ಭಾಗವಹಿಸಲು ಕೇಂದ್ರ ಕ್ರೀಡಾ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿತ್ತು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಟೂರ್ನಿಯಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಕಿಸ್ತಾನವು ನಿಗದಿತ ವೇಳಾಪಟ್ಟಿಯಲ್ಲಿ ಟೂರ್ನಿಯನ್ನು ಆಯೋಜಿಸುತ್ತದೆ ಮತ್ತು ಭಾರತ ತಂಡವು ಬರಲಿ ಅಥವಾ ಇಲ್ಲದಿರಲಿ ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಪಾಕ್ ಅಂಧರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೈಯದ್ ಸುಲ್ತಾನ್ ಶಾ ಹೇಳಿದ್ದಾರೆ. ‘ವಿಶ್ವಕಪ್ ಆತಿಥ್ಯಕ್ಕೆ ಎಲ್ಲಾ ವ್ಯವಸ್ಥೆಗಳನ್ನು ನಾವು ಪೂರ್ಣಗೊಳಿಸಿದೆ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲʼ ಎಂದು ಶಾ ಹೇಳಿದರು.