(ನ್ಯೂಸ್ ಕಡಬ) newskadaba.com ನವದೆಹಲಿ, ನ. 20. ದೆಹಲಿ ಹಾಗೂ ಸುತ್ತಮುತ್ತ ವಾಯುಗುಣಮಟ್ಟದ ಹದಗೆಡುವಿಕೆ ಮುಂದುವರೆದಿದ್ದು ರೈಲು, ವಿಮಾನ ಸಂಚಾರ ಹಾಗೂ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಸಾಲದ್ದಕ್ಕೆ ಜನರ ಉಸಿರಾಟಕ್ಕೂ ಸಮಸ್ಯೆ ಆಗುತ್ತಿದ್ದು, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಶೇ.300ರಷ್ಟು ಏರಿದೆ.
ದಿಲ್ಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅತಿ ಗಂಭೀರ ಎಂದು ಪರಿಗಣಿಸಲಾಗುವ 488 ಅಂಕ ತಲುಪಿದೆ. ಈ ಪೈಕಿ ದಿಲ್ಲಿಯ ಅಲಿಪುರ ಹಾಗೂ ಸೋನಿಯಾ ವಿಹಾರ ಪ್ರದೇಶದಲ್ಲಿ 500 ಅಂಕ ದಾಖಲಾಗಿದೆ.
‘ಇದರಿಂದಾಗಿ ಉಸಿರಾಟ ಸಮಸ್ಯೆಯಿಂದ ಎಮರ್ಜೆನ್ಸಿ ವಾರ್ಡುಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ವಾಡಿಕೆಗಿಂದ ಶೇ.15ರಷ್ಟು ಹೆಚ್ಚಿದೆ ಹಾಗೂ ಹೊರರೋಗಿ ವಿಭಾಗದಲ್ಲಿ ಉಸಿರಾಟ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಶೇ.300ರಷ್ಟು ಜಾಸ್ತಿಯಾಗಿದೆ’ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದಿಲ್ಲಿ ಸರ್ಕಾರವು ಉಸಿರಾಟ ಸಮಸ್ಯೆ ಚಿಕಿತ್ಸೆಗೆ ವೈದ್ಯರ ತಂಡಗಳನ್ನು ರಚಿಸಬೇಕು ಎಂದು ಎಲ್ಲ ಆಸ್ಪತ್ರೆಗಳಿಗೆ ಸೂಚಿಸಿದೆ. ಇದೇ ವೇಳೆ, ವಾಯುಮಾಲಿನ್ಯ ಸಮಸ್ಯೆ ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಹಾಗೂ ಕೃತಕ ಮಳೆಗೆ ಕೇಂದ್ರ ಸರ್ಕಾರ ಅನುಮತಿಸಬೇಕು ಎಂದು ದಿಲ್ಲಿ ಸಚಿವ ಗೋಪಾಲ ರಾಯ್ ಆಗ್ರಹಿಸಿದ್ದಾರೆ.