(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ನ. 20. ಇದೇ ಮೊದಲ ಬಾರಿಗೆ ಇಸ್ರೋ ಸಂಸ್ಥೆ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್ ಕಂಪನಿಯ ರಾಕೆಟ್ ಬಳಸಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಯಶಸ್ಸಿಯಾಗಿದೆ.
ಇಸ್ರೋದ ಜಿಸ್ಯಾಟ್ -20 ಸಂವಹನ ಉಪಗ್ರಹವನ್ನು ಹೊತ್ತುಕೊಂಡಿದ್ದ ಸ್ಪೇಸ್‌ಎಕ್ಸ್ ನ ಫಾಲ್ಕನ್ 9 ರಾಕೆಟ್ ಭಾರತೀಯ ಕಾಲಮಾನ ಸೋಮವಾರ ರಾತ್ರಿ 23:45ಕ್ಕೆ ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿದೆ. 34 ನಿಮಿಷದಲ್ಲಿ ರಾಕೆಟ್ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ.
ಇಸ್ರೋ ಮತ್ತು ಸ್ಪೇಸ್‌ಎಕ್ಸ್ ನಡುವಿನ ಅನೇಕ ವಾಣಿಜ್ಯ ಸಹಯೋಗಗಳಲ್ಲಿ ಇದು ಮೊದಲನೆಯದು ಮತ್ತು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಅವರ ಸ್ನೇಹಿತ ಮಸ್ಕ್ ಜೊತೆಗಿನ ಮೊದಲ ಒಪ್ಪಂದ ಇದಾಗಿದೆ. ಫಾಲ್ಕನ್ 9 ಮರುಬಳಕೆ ಮಾಡಬಹುದಾದ ರಾಕೆಟ್ ಆಗಿದೆ. ಇಲ್ಲಿಯವರೆಗೆ 19 ಬಾರಿ ಈ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಮೊದಲ ಹಂತ ಬೇರ್ಪಟ್ಟ ನಂತರ ಅಟ್ಲಾಂಟಿಕ್ ಸಾಗರದಲ್ಲಿ ನೆಲೆಗೊಂಡಿದ್ದ ಡ್ರೋನ್ ಹಡಗಿನಲ್ಲಿ ಲ್ಯಾಂಡ್ ಆಗಿದೆ.