ತಾಯಿ-ಮಗುವಿನ ಆರೋಗ್ಯ ರಕ್ಷಣೆಗೆ ಮೊಬೈಲ್ ಕರೆ ಸಂದೇಶ

(ನ್ಯೂಸ್ ಕಡಬ) newskadaba.com ನ. 13. ಕೇಂದ್ರ ಸರ್ಕಾರವು 4 ತಿಂಗಳು ಮೇಲ್ಪಟ್ಟ ಗರ್ಭಿಣಿ ಮಹಿಳೆಯ ಹಾಗೂ ಒಂದು ವರ್ಷದೊಳಗಿನ ಮಕ್ಕಳಿಗೆ ಕುಟುಂಬದ ಸದಸ್ಯರು ವಹಿಸಬೇಕಾದ ಕಾಳಜಿ, ಲಸಿಕೆ ಒದಗಿಸುವಿಕೆ ಹಾಗೂ ಇತರೆ ತಪಾಸಣೆ ಕೈಗೊಳ್ಳಲು ಸಹಾಯಕವಾಗುವ ದಿಶೆಯಲ್ಲಿ ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ವಿನೂತನ ಕಾರ್ಯಕ್ರಮ “ಕಿಲ್ಕಾರಿ” ಮೊಬೈಲ್ ಕರೆ ಆರಂಭಿಸಲಾಗಿದೆ ಎಂದು ರಾಜ್ಯ ಕಿಲ್ಕಾರಿ ಸಂಯೋಜಕಿ ಡಾ|| ಅಶ್ವಿನಿ ತಿಳಿಸಿದ್ದಾರೆ.

ಕಿಲ್ಕಾರಿಯು ಗರ್ಭಿಣಿಯರು, ತಾಯಂದಿರು ಮತ್ತು ಅವರ ಕುಟುಂಬಗಳಿಗೆ ಸಂತಾನೋತ್ಪತ್ತಿ, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಸಕಾಲಿಕ, ನಿಖರವಾದ ಮತ್ತು ಸಂಬಂಧಿತ ಮಾಹಿತಿಯನ್ನು ಒದಗಿಸುವ ಮೊಬೈಲ್ ಆರೋಗ್ಯ ಶಿಕ್ಷಣ ಸೇವೆಯಾಗಿದೆ. ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗಿದೆ, ಕುಟುಂಬಗಳ ಆರೋಗ್ಯ ಜ್ಞಾನವನ್ನು ಸುಧಾರಿಸಲು ಮತ್ತು ಜೀವ ಉಳಿಸುವ, ಆರೋಗ್ಯಕರ ಅಭ್ಯಾಸಗಳನ್ನು ತಿಳಿಸುವ ಗುರಿಯನ್ನು ಹೊಂದಿದೆ.

ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮದಡಿಯಲ್ಲಿ RCH Portal ನಲ್ಲಿ ದಾಖಲಾಗಿರುವ ಗರ್ಭಿಣಿಯರಿಗೆ ಕುಟುಂಬಗಳ ಮೊಬೈಲ್ ಫೋನ್‍ ಗಳಿಗೆ ನೇರವಾಗಿ ಸಮಯ-ಸೂಕ್ಷ್ಮ ಆಡಿಯೊ ಮಾಹಿತಿಯನ್ನು ತಲುಪಿಸಲು ಕಿಲ್ಕಾರಿ ಪ್ರಸ್ತುತ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (IVR) ತಂತ್ರಜ್ಞಾನವನ್ನು ಬಳಸಲಾಗಿದೆ. ಗರ್ಭಧಾರಣೆಯಾದ ಎರಡನೇ ತ್ರೈಮಾಸಿಕದಿಂದ ಮಗುವಿಗೆ ಒಂದು ವರ್ಷದವರೆಗೆ (72 ವಾರಗಳು) ತಾಯಿ ಮತ್ತು ಮಗುವಿನ ಸಾವುಗಳು ಸಂಭವಿಸುವುದನ್ನು ತಪ್ಪಿಸಲು ನಿರ್ಣಾಯಕ ಅವಧಿಯನ್ನು ಕರೆಗಳು ಒಳಗೊಳ್ಳುತ್ತವೆ.

Also Read  ಸಾರ್ವಜನಿಕರ ಸಂಚಾರದ ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಿ ➤ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ

ಕಿಲ್ಕಾರಿ ಕಾರ್ಯಕ್ರಮದಡಿ ಆರ್.ಸಿ.ಹೆಚ್ ಪೋರ್ಟಲ್‍ನಲ್ಲಿ  ನೋಂದಾಯಿಸಿದ ಗರ್ಭಿಣಿ ಅಥವಾ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆಗೆ ಪ್ರತಿವಾರ ಕರೆ ಮಾಡುವ ಮೂಲಕ ಕಾಳಜಿ ವಹಿಸಲಾಗುವುದು.  ಮೊಬೈಲ್ ಸಂಖ್ಯೆ 0124-4451600 ರ ಮೂಲಕ ಸಂಪರ್ಕಿಸಿ ಪಾಲಕರೊಂದಿಗೆ ಮಾತನಾಡಲಾಗುವುದು. ಕುಟುಂಬದ ಸದಸ್ಯರು ತಾಯಿ ಮಗುವಿನ ಸುಸ್ಥಿರ ಆರೋಗ್ಯಕ್ಕಾಗಿ ಸಹಕರಿಸಬೇಕು. ಒಂದು ವೇಳೆ ಕರೆ ಸ್ವೀಕರಿಸಲು ಅಸಾಧ್ಯವಾದಲ್ಲಿ ಪುನಃ ಆರೋಗ್ಯ ಮಾಹಿತಿ ಪಡೆಯಲು Inbox number 14423ಗೆ ಕರೆ ಮಾಡಬಹುದು.

ಗರ್ಭಿಣಿ ಎಂದು ತಿಳಿದ  ದಿನದಿಂದಲೇ ಆರೋಗ್ಯ ಇಲಾಖೆ ಮೂಲಕ ತಾಯಿ ಕಾರ್ಡ್ ವಿತರಣೆ, ಟಿಡಿ ಚುಚ್ಚುಮದ್ದು ನೀಡುವಿಕೆ, ರಕ್ತ ಹೀನತ ತಡೆಗೆ ಕನಿಷ್ಠ 180 ಕಬ್ಬಿಣಾಂಶ ಮಾತ್ರೆಗಳ ವಿತರಣೆ, ಪ್ರತಿ ತಿಂಗಳು ವೈದ್ಯರಿಂದ ತಪಾಸಣೆ ರಕ್ತಪರೀಕ್ಷೆ ಹುಟ್ಟಿನಿಂದ ಒಂದು ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಲಸಿಕೆ ಕುರಿತು ಪಾಲಕರಿಗೆ ಮನನ ಮಾಡುವ ಮಹತ್ವಪೂರ್ಣ ಕಾರ್ಯಕ್ರಮ ಇದಾಗಿದೆ.

Also Read  ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಪುಸಲಾಯಿಸಿ ಕರೆದೊಯ್ದ ಫೇಸ್ ಬುಕ್ ಫ್ರೆಂಡ್ ► ಜೊತೆಯಾಗಿ ತೆರಳುತ್ತಿದ್ದಾಗ ಬಂಟ್ವಾಳದಲ್ಲಿ ಕಾರು ಅಪಘಾತ

ಜಿಲ್ಲೆಯಲ್ಲಿ  ಪ್ರತಿ ತಿಂಗಳ 9 ಮತು 24 ತಾರೀಖಿನಂದು ಎಲ್ಲಾ ಗರ್ಭಿಣಿಯರ ತಪಾಸಣೆಯನ್ನು ಮಾಡಲಾಗುತ್ತಿದ್ದು, ಎಲ್ಲಾ ಮಾಹಿತಿಯನ್ನು ಪೋನ್ ಮೂಲಕ ಪಾಲಕರಿಗೆ ಮಾಹಿತಿ ವಿನಿಮಯ ಮಾಡುವ ಮೂಲಕ ಮಗುವಿನ ಆರೋಗ್ಯದ ಕಾಳಜಿ ವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಹೆಚ್.ಆರ್ ತಿಮ್ಮಯ್ಯ ತಿಳಿಸಿದ್ದಾರೆ.

error: Content is protected !!
Scroll to Top