(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 12. ಇನ್ನು ಮುಂದೆ ಅಲ್ಕೋಹಾಲ್ ಇರುವ ಯಾವುದೇ ಕಡೆ ಹೋದರು ಜೇಬಲ್ಲಿ ಆಧಾರ್ ಕಾರ್ಡ್ ಇಟ್ಟುಕೊಳ್ಳಬೇಕಾಗಬಹುದು. ಎಷ್ಟೇ ದುಡ್ಡಿದ್ದರೂ ಆಧಾರ್ ಕಾರ್ಡ್ ಇಲ್ಲ ಎಂದರೆ ಮದ್ಯ ಸಿಗುವುದು ಕಷ್ಟವಾಗಲಿದೆ. ಯಾಕಂದ್ರೆ ಸುಪ್ರೀಂ ಕೋರ್ಟ್ ಮದ್ಯ ಖರೀದಿ, ಕುಡಿಯುವ ವಯಸ್ಸಿನ ಕುರಿತ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮದ್ಯ ಖರೀದಿಗೆ ವಯಸ್ಸು ದೃಢೀಕರಣ ಅತ್ಯಗತ್ಯ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮದ್ಯ ಸೇವೆಸಿ ಚಾಲನೆ ಮಾಡುತ್ತಿರುವ ಘಟನೆ, ಅಪಘಾತ, ಸಾವು ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಈ ವೇಳೆ ಮದ್ಯ ಖರೀದಿ, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಇತರ ಕಡೆಗಳಲ್ಲಿ ಕುಡಿಯಲು ವಯಸ್ಸು ಖಚಿತಪಡಿಸಿಕೊಳ್ಳಬೇಕು ಅನ್ನೋ ಸಲಹೆಯನ್ನು ಅರ್ಜಿ ಸೂಚಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಈ ಕುರಿತು ಕೇಂದ್ರ ಸರ್ಕಾರಕ್ಕೆ ಉತ್ತರ ನೀಡುವಂತೆ ನೋಟಿಸ್ ನೀಡಿದೆ.