MBBS ವ್ಯಾಸಂಗ ಮಾಡುವ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ 50 ಲಕ್ಷ ರೂ. ನೀಡುವ ಸ್ಕೀಂ ಗೆ ಕೊಕ್..!

(ನ್ಯೂಸ್ ಕಡಬ) newskadaba.com ನ. 09. ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಕೋಟಾದಡಿ MBBS ವ್ಯಾಸಂಗ ಮಾಡುವ ಎಸ್ಸಿ, ಎಸ್ಟಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 50 ಲಕ್ಷ ರೂ.ವರೆಗೆ ಕಾಲೇಜು ಶುಲ್ಕ ಪಾವತಿಸುವ ಸಮಾಜ ಕಲ್ಯಾಣ ಇಲಾಖೆಯ ‘ಪ್ರೋತ್ಸಾಹಧನ ಯೋಜನೆ’ಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿರುವ ಕುರಿತು ವರದಿಯಾಗಿದೆ.

ಸಮಾಜ ಕಲ್ಯಾಣ ಇಲಾಖೆಯು ಅ. 24ರಂದು ಹೊರಡಿಸಿರುವ ‘ಸೇರ್ಪಡೆ ಆದೇಶ’ದ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಪಡೆದು, ನೀಟ್‌ ಪರೀಕ್ಷೆಯ ರ್‍ಯಾಂಕ್‌ ನಿಂದ ಸರ್ಕಾರಿ ಕೋಟಾದಡಿ ಸೀಟ್ ಲಭ್ಯವಾಗದೇ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗೆ ಕಾಲೇಜು ಶುಲ್ಕ ಪಾವತಿಸಲು 25 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು. ಅಲ್ಲದೇ, ಆ ವಿದ್ಯಾರ್ಥಿ 1ನೇ ವರ್ಷದ ಪರೀಕ್ಷೆಯಲ್ಲಿ ಶೇ.60ರಷ್ಟು ಅಂಕ ಪಡೆದರೆ ಪುನಃ 25 ಲಕ್ಷ ರೂ. ಮಂಜೂರು ಮಾಡಬೇಕು ಎಂದು ತಿಳಿಸಲಾಗಿತ್ತು. ಆದರೆ, ಈ ಆದೇಶ ಹೊರಡಿಸಿದ ಎರಡೇ ದಿನಗಳಲ್ಲಿ ಅಂದರೆ ಅ.26ರಂದು ಹಣಕಾಸು ಇಲಾಖೆಯು ಪ್ರಸ್ತಾವನೆಯನ್ನು ತಿರಸ್ಕರಿಸಿದೆ.

Also Read  ಕೊಂಬಾರು :ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ

ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯೊಂದಿಗೆ ಮೆರಿಟ್ ಆಧಾರದ ಮೇಲೆ ಹಾಸ್ಟೆಲ್‌ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಮೂಲಸೌಕರ್ಯ ಸುಧಾರಣೆಗಾಗಿ ಅನುದಾನ ಕೋರಿರುವ ಅನೇಕ ಪ್ರಸ್ತಾವನೆಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಕೈಬಿಡಲಾಗಿದೆ. ಇಲಾಖೆಯು ಹಾಲಿ ಹೊಂದಿರುವ ಯೋಜನೆಯಡಿಯಲ್ಲಿ ಕಠಿಣ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಬರೆದು ಐಐಟಿ, ಐಐಎಂ, ಐಐಎಸ್ಸಿ, ಎನ್‌ ಐಟಿ ಮುಂತಾದಡೆ ಸೀಟು ಪಡೆಯುವ ಪ್ರತಿಭಾನ್ವಿತರಿಗೆ ಹಾಗೂ ನೀಟ್ ಮೂಲಕ ಸರ್ಕಾರಿ ಸೀಟು ಪಡೆದು ಎಂಬಿಬಿಎಸ್ ಓದುವವರಿಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಹೀಗಿರುವಾಗ ಆಡಳಿತ ಮಂಡಳಿ ಕೋಟಾದವರಿಗೆ 50 ಲಕ್ಷ ರೂ. ಪ್ರೋತ್ಸಾಹಧನ ನೀಡುವುದು ಅಸಮಂಜಸವಾಗುತ್ತದೆ ಎನ್ನುವ ಕಾರಣಕ್ಕೆ ಆರ್ಥಿಕ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

error: Content is protected !!
Scroll to Top