ಎಡನೀರು ಸ್ವಾಮೀಜಿ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ- ಸಂಸದರ ಪತ್ರಕ್ಕೆ ತುರ್ತು ಸ್ಪಂದಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ ಕೇರಳ ಸಿಎಂ

(ನ್ಯೂಸ್ ಕಡಬ) newskadaba.com ನ. 09. ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಯವರು ಪ್ರಯಾಣಿಸುತ್ತಿದ್ದ ವಾಹನ ತಡೆದು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬರೆದ ಪತ್ರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತುರ್ತು ಸ್ಪಂದಿದ್ದಾರೆ. ಜೊತೆಗೆ ಈ ಘಟನೆ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

ನ. 03ರಂದು ಎಡನೀರು ಶ್ರೀಗಳು ಕಾಸರಗೋಡಿನ ಬೋವಿಕ್ಕಾನದಲ್ಲಿ ಸಂಚರಿಸುತ್ತಿರುವಾಗ ಅವರ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡಗಟ್ಟಿ ಹಲ್ಲೆಗೆ ಯತ್ನಿಸಿದ್ದರು. ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಕ್ಯಾ. ಚೌಟ ಅವರು ಶ್ರೀಗಳ ಮೇಲಿನ ದಾಳಿ ಯತ್ನವನ್ನು ತೀವ್ರವಾಗಿ ಖಂಡಿಸಿದ್ದರು. ಹಿಂದೂ ಸಮಾಜದ ಮಾರ್ಗದರ್ಶಕರಾದ ಎಡನೀರು ಶ್ರೀಗಳ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕೇರಳ ಸಿಎಂಗೆ ನ. 06ರಂದು ಪತ್ರ ರವಾನಿಸಿದ್ದರು. ಸಂಸದರ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಪಿಣರಾಯಿ ಅವರು ಘಟನೆಯ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ಪೊಲೀಸ್ ಇಲಾಖೆ ಕಾರ್ಯೋನ್ಮುಖರಾಗುವಂತೆ ಡಿಜಿಪಿಯವರಿಗೆ ಸೂಚನೆ ನೀಡಿರುವುದಾಗಿ ತಮ್ಮ ಪ್ರತ್ಯುತ್ತರ ನೀಡಿದ್ದಾರೆ.

Also Read  ಪಿಎಂಇಜಿಪಿ ಹಾಗೂ ಸಿಎಂಇಜಿಪಿ ಯೋಜನೆಯಡಿ ವಂಚನೆ - ಸಾರ್ವಜನಿಕರಿಗೆ ಎಚ್ಚರಿಕೆ

ಕೇರಳ ಸಿಎಂ ನಡೆ ಸ್ವಾಗತಾರ್ಹ:

ಈ ಘಟನೆಗೆ ಕೇರಳ ಸಿಎಂ ಪಿಣರಾಯಿ ಅವರು ತುರ್ತು ಸ್ಪಂದಿಸಿರುವ ಸ್ವಾಗತಿಸಿರುವ ಕ್ಯಾ. ಚೌಟ ಅವರು ಈ ಘಟನೆಯು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡಿದ್ದು,  ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬರೆದ ನಮ್ಮ ಪತ್ರಕ್ಕೆ ಕೇರಳ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇರಳ ಪೊಲೀಸ್ ಇಲಾಖೆಗೆ ನಿರ್ದೇಶಿಸಿದ್ದಾರೆ. ಈ ವಿಚಾರವಾಗಿ ಸಿಎಂ ಪಿಣರಾಯಿ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕಾಸರಗೋಡಿನಲ್ಲಿ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಲು, ಧಾರ್ಮಿಕ ಸಂಸ್ಥೆಗಳ ಸುರಕ್ಷತೆಗೆ ಕೇರಳ ಪೊಲೀಸರು ಆದ್ಯತೆ ನೀಡಬೇಕಾಗಿದೆ” ಎಂದು ಸಂಸದರು ಮನವಿ ಮಾಡಿದ್ದಾರೆ.

ಹಿಂದೂ ಸಮಾಜದ ಮಾರ್ಗದರ್ಶಕರು ಹಾಗೂ ಆಧ್ಯಾತ್ಮಿಕ ಗುರುಗಳಾದ ಎಡನೀರು ಶ್ರೀಗಳ ಮೇಲೆ ಹಲ್ಲೆ ನಡೆಸಿರುವ ಘಟನೆಯು ಈ ಪ್ರದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಕಾನೂನಿನ ಭಯವಿಲ್ಲದೆ ನಡುರಸ್ತೆಯಲ್ಲಿಯೇ ಅತ್ಯಂತ ಗೌರವಯುತ ಸ್ಥಾನದಲ್ಲಿರುವ ಸ್ವಾಮೀಜಿ ಕಾರನ್ನು ತಡೆದು ನಿಲ್ಲಿಸಿ ರೌಡಿಸಂ ತೋರಿಸಿ ಸಮಾಜದಲ್ಲಿ ಭೀತಿ ಸೃಷ್ಟಿಸುವ ಇಂತಹ ಪುಂಡರನ್ನು ತಕ್ಷಣ ಮಟ್ಟಹಾಕಬೇಕು. ಕಾಸರಗೋಡಿನ ಗಡಿಭಾಗದ ಜಿಲ್ಲೆಯ ಸಂಸದನಾಗಿ ಮತ್ತು ಸ್ವಾಮೀಜಿಯವರ ಮೇಲೆ ಅತೀವ ಗೌರವ ಹೊಂದಿರುವ ವ್ಯಕ್ತಿಯಾಗಿ, ಈ ಕೃತ್ಯದಲ್ಲಿ ಶಾಮೀಲಾದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಸದರು ಕೇರಳ ಸಿಎಂಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದರು. ಈ ಘಟನೆ ಬಗ್ಗೆ ಹಿಂದೂ ಸಂಘಟನೆ ಸೇರಿ ಜಿಲ್ಲೆಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

error: Content is protected !!
Scroll to Top