(ನ್ಯೂಸ್ ಕಡಬ) newskadaba.com ನವದೆಹಲಿ, ನ. 07 ಆಸ್ಟ್ರೇಲಿಯಾ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಮಕ್ಕಳ ಭವಿಷ್ಯ ಹಾಳುಮಾಡುತ್ತಿದೆ ಅನ್ನೋ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾ ಅತಿಯಾದ ಬಳಕೆಯಿಂದ ಹಲವರು ಬಲಿಯಾಗಿದ್ದಾರೆ, ಒಂದಷ್ಟು ಮಂದಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಸೋಶಿಯಲ್ ಮೀಡಿಯಾ ಇದೀಗ ಆತಂಕ ಹೆಚ್ಚಿಸಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಇದೀಗ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ ಮಾಡುವುದನ್ನು ನಿಷೇಧಿಸಲಾಗುತ್ತಿದೆ. ಈ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟೋನಿ ಆಲ್ಬನೀಸ್ ಹೇಳಿದ್ದಾರೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಬಳಕೆ 16 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧಿಸಲಾಗುತ್ತಿದೆ. ಈ ಕುರಿತು ಮಾತನಾಡಿದ ಆ್ಯಂಟೋನಿ ಅಲ್ಬನಿಸ್, ಕಳೆದ ಕೆಲ ವರ್ಷಗಳಿಂದ ಸೋಶಿಯಲ್ ಮೀಡಿಯಾ ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ಈ ಸೋಶಿಯಲ್ ಮೀಡಿಯಾ ಮಕ್ಕಳಿಗೆ ಮಾರಕವಾಗಿದೆ. ಅವರ ಬೆಳವಣಿಗೆ ಕುಂಠಿತ ಮಾಡುತ್ತಿದೆ. ಸಮಸ್ಯೆಗೆ ಸಿಲುಕುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಮೋಸ,ವಂಚನೆ ಸೇರಿದಂತೆ ಮಕ್ಕಳು ಹಲವು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆಯಿಂದ ದೂರವಿಡುವಂತೆ ಹೊಸ ಕಾನೂನು ತರಲಾಗುತ್ತಿದೆ ಎಂದು ಆ್ಯಂಟೋನಿ ಅಲ್ಬನೀಸ್ ಹೇಳಿದ್ದಾರೆ.