(ನ್ಯೂಸ್ ಕಡಬ) newskadaba.com ನವದೆಹಲಿ, ನ. 07. ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ 7.5 ಲಕ್ಷ ರೂಪಾಯಿ ಯಿಂದ 10 ಲಕ್ಷ ರೂ.ವರೆಗೆ ಖಾತರಿರಹಿತ ಸಾಲದ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ.
ಈ ಯೋಜನೆಗಾಗಿ 3,600 ಕೋಟಿ ನಿಧಿಯನ್ನು ಮೀಸಲಿಡಲಾಗಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್, ‘ಆರ್ಥಿಕ ಸಮಸ್ಯೆಗಳಿಂದಾಗಿ ದೇಶದ ಯುವಕರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ತಪ್ಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲು ಈ ಯೋಜನೆ ರೂಪಿಸಲಾಗಿದೆ’ ಎಂದರು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಏಕೀಕೃತ ಪೋರ್ಟಲ್ ಪರಿಚಯಿಸಲಿದೆ. 860 ಕ್ಯುಎಚ್‌ಇಐ ಸಂಸ್ಥೆಗಳ 22 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಸಮರ್ಥರಾಗಿದ್ದಾರೆ.ಯೋಜನೆಯ ಲಾಭ ಪಡೆಯುವವರ ಪಟ್ಟಿಯನ್ನು ಎನ್‌ಐಆರ್‌ಎಫ್ ರ್‍ಯಾಂಕಿಂಗ್ ಆಧರಿಸಿ ಪ್ರತಿ ವರ್ಷ ಪರಿಷ್ಕರಿಸಲಾಗುವುದು.