(ನ್ಯೂಸ್ ಕಡಬ) newskadaba.com ನ. 06. ಹೆಣ್ಣುಮಕ್ಕಳಿಗೆ ರಕ್ಷಣೆ ಮತ್ತು ಭದ್ರತೆ ನೀಡುವಂತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರವೀಣ್ ಮಂಗಳೂರು ಮತ್ತು ಮೂಸಾ ಶರೀಫ್ ರವರ ನಾಯಕತ್ವದಲ್ಲಿ ದಕ್ಷಿಣದಿಂದ ಉತ್ತರಕ್ಕೆ (ಮಂಗಳೂರು- ದೆಹಲಿ) “ಬೇಟಿ ಬಚಾವೋ” ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಇಡೀ ವಿಶ್ವಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಪಾಠ ಹೇಳಿಕೊಟ್ಟ ನಮ್ಮ ಭವ್ಯ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಒಂದು ಹೆಣ್ಣು ಓದಿನ ವಿಚಾರವಾಗಿಯೋ, ಕೆಲಸದ ವಿಚಾರವಾಗಿಯೋ, ಒಂದು ವ್ಯಾಪಾರದ ವಿಚಾರವಾಗಿಯೋ ಅಥವಾ ಇನ್ಯಾವುದೋ ವಿಚಾರವಾಗಿಯೋ ಮನೆಯಿಂದ ಹೊರಗಡೆ ಹೋದರೆ ಆಕೆ ಕ್ಷೇಮವಾಗಿ ಮತ್ತೆ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಹಾಗೂ ಭರವಸೆ ಆ ಕುಟುಂಬಗಳಿಗೆ ಇಲ್ಲ. ಯಾಕೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ? ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದವನಿಗೆ ಯಾಕೆ ನಮ್ಮ ದೇಶದ ಕಾನೂನು ಸುವ್ಯವಸ್ಥೆಯಲ್ಲಿ ಕಠಿಣವಾದ ಶಿಕ್ಷೆ ಇಲ್ಲ? ದೇಶದಲ್ಲಿ ಸಮಾನತೆ ಇಲ್ವಾ? ಈ ನಮ್ಮ ಭಾರತ ದೇಶದಲ್ಲಿ ಒಬ್ಬ ಪುರುಷ ಎಷ್ಟು ಸ್ವತಂತ್ರವಾಗಿ ಜೀವನ ಮಾಡುತ್ತಾನೋ ಹಾಗೆ ಮಹಿಳೆಯು ಕೂಡಾ ಘನತೆ, ಗೌರವದಿಂದ ಹಾಗೂ ಪ್ರತಿಷ್ಠೆಯಿಂದ ಸಮಾಜದಲ್ಲಿ ಬದುಕುವಂತ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಡುವುದು ಸರ್ಕಾರದ ಜವಾಬ್ದಾರಿಯಲ್ಲವೇ. ಹೆಸರಿಗಷ್ಟೇ ಈ ಬೇಟಿ ಬಚಾವೋ ಎಂಬ ಯೋಜನೆ. ಈ ಯೋಜನೆ ದೇಶದ ಯಾವುದೇ ಹೆಣ್ಣು ಮಕ್ಕಳಿಗೆ ನೆರವಾಗುತ್ತಿಲ್ಲ. ವಿದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಇರುವಂತಹ ರಕ್ಷಣೆ ನಮ್ಮ ದೇಶದಲ್ಲಿ ಯಾಕೆ ಇಲ್ಲ? ಪ್ರತಿ ವರ್ಷ 35 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇದೇ ರೀತಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳು ಮುಂದುವರೆದರೆ ಕೊನೆಗೆ ನಾವು ಹೆಣ್ಣು ಮಕ್ಕಳನ್ನು ಮ್ಯೂಸಿಯಂನಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇದರ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ದೆಹಲಿಯ ಅವರ ಕಚೇರಿಯಲ್ಲಿ ಭೇಟಿಯಾಗಿ, ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ “ಬೇಟಿ ಬಚಾವೋ” ಎಂಬ ಯೋಜನೆಯನ್ನು ಹೆಚ್ಚು ಬಲಿಷ್ಠಗೊಳಿಸಿ ದೇಶದ ಯಾವುದೇ ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾಗದೇ ಸಮಾಜದಲ್ಲಿ ಘನತೆ, ಗೌರವ ಮತ್ತು ಪ್ರತಿಷ್ಠೆಯಿಂದ ಬದುಕುವಂತೆ, ಹೆಣ್ಣು ಹೆತ್ತ ತಂದೆ-ತಾಯಿ ನೆಮ್ಮದಿಯಿಂದ ಇರುವಂತೆ ಹಾಗೂ ಇಡೀ ದೇಶವೇ ಒಂದು ಹೆಣ್ಣನ್ನು ಗೌರವದಿಂದ ಕಾಣುವಂತೆ ಈ ಯೋಜನೆಯನ್ನು ರೂಪಿಸಬೇಕೆಂದು ದೇಶಕ್ಕೆ ತಾಯಿ ಸ್ಥಾನದಲ್ಲಿರುವಂತಹ ಪ್ರಧಾನಮಂತ್ರಿಗಳನ್ನು ಮನವಿ ಮಾಡಿಕೊಳ್ಳುತ್ತೇವೆ ಎಂದು ಪಾದಯಾತ್ರೆ ಹೊರಟವರು ತಿಳಿಸಿದ್ದಾರೆ. ಪ್ರವೀಣ್ ಮಂಗಳೂರು, ಮೂಸ ಷರೀಫ್ ನಾಯಕತ್ವದಲ್ಲಿ, ನೌಫಲ್ ಅಬ್ಬಾಸ್, ಆರಿಫ್, ಶುಕೂರ್, ಬಾಲಕೃಷ್ಣ, ಹಂಝ ಮೊದಲಾದವರು ಈ ದೆಹಲಿಯವರೆಗೆ ಪಾದಯಾತ್ರೆ ನಡೆಸಲಿದ್ದಾರೆ.