KPSC- ಸಾರಿಗೆ ಇಲಾಖೆ ನೇಮಕಾತಿಯಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಅ. 31. ಕರ್ನಾಟಕ ಲೋಕಸೇವಾ ಆಯೋಗ ಸಾರಿಗೆ ಇಲಾಖೆಯು ಹೊರಡಿಸಿದ್ದಂತಹ ನೇಮಕಾತಿಯಲ್ಲಿ ತಿದ್ದುಪಡಿ ಮಾಡಿ ಅಧಿಸೂಚನೆಯನ್ನು ಹೊರಡಿಸಿದ್ದು, ವಯೋಮಿತಿಯನ್ನು ಬದಲಾವಣೆ ಮಾಡಲಾಗಿದೆ. ಇನ್ನುಳಿದಂತೆ ಹಿಂದಿನ ಅಧಿಸೂಚನೆಗಳಲ್ಲಿ ತಿಳಿಸಲಾಗಿರುವ ಮಾಹಿತಿ/ ವಿವರಗಳನ್ನು ಯಥಾವತ್ತಾಗಿ ಅನ್ವಯಿಸಿಕೊಳ್ಳತಕ್ಕದ್ದು ಹಾಗೂ ಹೆಚ್ಚಿನ ವಿವರಗಳಿಗಾಗಿ ಸದರಿ ಅಧಿಸೂಚನೆಗಳನ್ನು ಓದಿಕೊಳ್ಳತಕ್ಕದ್ದು ಎಂದು ರಮಣದೀಪ್ ಚೌಧರಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಆಯೋಗವು 2023-24ನೇ ಸಾಲಿನಲ್ಲಿ ಸಾರಿಗೆ ಇಲಾಖೆಯಲ್ಲಿನ ಗ್ರೂಪ್-ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು 70 (ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಅಧಿಸೂಚನೆ ಜಾರಿ ಮಾಡಲಾಗಿರುತ್ತದೆ ಎಂದು ಹೇಳಿದ್ದಾರೆ. ಸದರಿ ಅಧಿಸೂಚನೆಯಲ್ಲಿ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ಅರ್ಹತೆ 35 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 40 ವರ್ಷಗಳು ಎಂದು ನಿಗದಿಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.

ವಯೋಮಿತಿಯಲ್ಲಿ ಬದಲಾವಣೆ: ಪ್ರಸ್ತುತ ಕರ್ನಾಟಕದ ಸರ್ಕಾರದ ಆದೇಶ ದಿನಾಂಕ 10.09.2024ರಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ, ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಲಿಕೆಯನ್ನು ನೀಡಿ ಆದೇಶಿಸಿದೆ. ಈ ಆದೇಶದನ್ವಯ ಸದರಿ ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದ, ವಯೋಮಿತಿಯನ್ನು ಮಾರ್ಪಾಡು ಮಾಡಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ವಯೋಮಿತಿ ಗರಿಷ್ಠ ಸಾಮಾನ್ಯ 38 ವರ್ಷಗಳು. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗರಿಷ್ಠ 40 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 43 ವರ್ಷಗಳು. ಸರ್ಕಾರದ ಮೇಲ್ಕಂಡ ಆದೇಶದ ಹಿನ್ನೆಲೆಯಲ್ಲಿ ದಿನಾಂಕ 14-03-2024ರ ಅಧಿಸೂಚನೆಯಲ್ಲಿನ ಗ್ರೂಪ್-ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು 70 (ಆರ್‌ಪಿಸಿ) ಹುದ್ದೆಗಳಿಗೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಅರ್ಹ ಅಭ್ಯರ್ಥಿಗಳು ದಿನಾಂಕ 05-11-2024 ರಿಂದ 12-11-2024 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ. ಅಭ್ಯರ್ಥಿಗಳು ವಿಸ್ತರಿತ ಕೊನೆಯ ದಿನಾಂಕವಾದ 20-11-2024ಕ್ಕೆ ಆಯಾ ಮೀಸಲಾತಿಗಳ ಮುಂದೆ ನಮೂದಿಸಿರುವ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

Also Read  ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

 

error: Content is protected !!
Scroll to Top