(ನ್ಯೂಸ್ ಕಡಬ) newskadaba.com ಅ.24, ಮಾಸ್ಕೋ: ಭಾರತದ ಆರ್ಥಿಕ ಬೆಳವಣಿಗೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಕ್ತಕಂಠದಿಂದ ಶ್ಲಾಘಿಸಿದರು. ಭಾರತದ ಬೆಳವಣಿಗೆ ಬ್ರಿಕ್ಸ್ ರಾಷ್ಟ್ರಗಳಿಗೆ ಮಾದರಿ ಎಂದೂ ಅವರು ಹೇಳಿದರು. ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16ನೇ ಬ್ರಿಕ್ಸ್ ಶೃಂಗಸಭೆ ಯಲ್ಲಿ ಅವರು ಮಾತನಾಡಿ ಭಾರತದ ಸಾಧನೆಗೆ ಮೆಚ್ಚುಗೆ ಸೂಚಿಸಿದರು. ಜತೆಗೆ 3 ದಿನಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.
“ನಾವೆಲ್ಲರೂ ಹೆಚ್ಚಿನ ಆರ್ಥಿಕ ಬೆಳವಣಿಗೆಯ ದರವನ್ನು ಖಚಿತಪಡಿಸಿಕೊಳ್ಳುವ ಅಗತ್ಯದ ಬಗ್ಗೆ ಮಾತನಾಡುತ್ತೇವೆ. ನೀವು (ನರೇಂದ್ರ ಮೋದಿ) ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೀರಿ” ಎಂದು ಪುಟಿನ್ ಹೇಳಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಟಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ. “ಈ ಸಾಧನೆಗಾಗಿ ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ನಿಮ್ಮಲ್ಲಿನ ಶೇ. 7.5 ಆರ್ಥಿಕ ಬೆಳವಣಿಗೆ. ಇದು ನಮ್ಮಲ್ಲಿ ಅನೇಕರಿಗೆ ಉದಾಹರಣೆ” ಎಂದು ಅವರು ತಿಳಿಸಿದರು.
“ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಬದಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಬೆಳವಣಿಗೆಯನ್ನು ನಾವು ಶೇ. 7ಕ್ಕೆ ಅಂದಾಜಿಸಿದ್ದೇವೆ. 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡಾ 4.4ಕ್ಕೆ ಇಳಿಯುವ ನಿರೀಕ್ಷೆಯಿದೆʼʼ ಎಂದು ಐಎಂಎಫ್ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಮಂಗಳವಾರ ಹೇಳಿದ್ದರು. ಬ್ರಿಕ್ಸ್ ಶೃಂಗಸಭೆಯ ಹೊರತಾಗಿ ಪುಟಿನ್ ಅವರು ಅಕ್ಟೋಬರ್ 22ರಂದು ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಕಳೆದ ವರ್ಷ ದ್ವಿಪಕ್ಷೀಯ ವ್ಯಾಪಾರ ವಹಿವಾಟು ದಾಖಲೆಯ ಗರಿಷ್ಠ 56.8 ಬಿಲಿಯನ್ ಡಾಲರ್ ತಲುಪಿದೆ. ಇದು ಶೇ. 60ಕ್ಕಿಂತ ಹೆಚ್ಚಾಗಿದೆ ಎಂದು ಟಾಸ್ ವರದಿ ಮಾಡಿದೆ. ಈ ವರ್ಷದ ಜನವರಿ-ಆಗಸ್ಟ್‌ನಲ್ಲಿ ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ ವಹಿವಾಟು ಶೇ. 9ರಷ್ಟು ಹೆಚ್ಚಾಗಿದ್ದು, 37.4 ಬಿಲಿಯನ್ ಡಾಲರ್ ಆಗಿದೆ.