ಶಾಲಾ ವಾಹನ ಮತ್ತು ಪಿಕಪ್ ನಡುವೆ ಅಪಘಾತ – ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೃತ್ಯು..!

(ನ್ಯೂಸ್ ಕಡಬ) newskadaba.com ಅ.24. ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ರಿಕ್ಷಾ ಮತ್ತು ಪಿಕಪ್‌ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬೆಳ್ಮ ಗ್ರಾಮದ ಕಲ್ಲಪಾದೆ ಎಂಬಲ್ಲಿ ಸಂಭವಿಸಿದೆ.

ಮೃತ ವಿದ್ಯಾರ್ಥಿನಿಯನ್ನು ಬಡಕಬೈಲು ಮಹಮ್ಮದ್‌ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ ಆಯಿಷಾ ವಹಿಬಾ (11) ಎಂದು ಗುರುತಿಸಲಾಗಿದೆ. ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ರಿಕ್ಷಾ ಕಲ್ಲಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಪಿಕಪ್‌ ವಾಹನ ಢಿಕ್ಕಿ ಹೊಡೆದಿದ್ದು, ಪರಿಣಾಮ ಆಯಿಷಾ ಗಂಭೀರ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ರಿಕ್ಷಾದಲ್ಲಿದ್ದ ಚಾಲಕ ಹಾಗೂ ಇತರೆ ನಾಲ್ವರು ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top