(ನ್ಯೂಸ್ ಕಡಬ) newskadaba.com ಅ.23, ಪುತ್ತೂರು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಅದ್ವಿತೀಯ ಸಾಧನೆ ಮಾಡುತ್ತಾ ಬಂದಿರುವ ಪುತ್ತೂರು ತಾಲೂಕಿನ ಎಲ್ಲ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಸ್ಥಾನವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಹೊಸ ವರ್ಷದ ಆಗಮನದೊಂದಿಗೆ ಹೊಸ ಶಿಕ್ಷಣ ಸೌಧದಲ್ಲಿ ಕಾರ್ಯಾರಂಭ ಮಾಡುವ ಯೋಗ ಅಧಿಕಾರಿಗಳಿಗೆ ಸಿಗಲಿದೆ.
ಪುತ್ತೂರು ತಾಲೂಕಿನಲ್ಲಿ ಹೊಸ ಬಿಇಒ ಕಚೇರಿ ನಿರ್ಮಾಣವಾಗುತ್ತಿದೆ. ನೆಲ್ಲಿಕಟ್ಟೆಯಲ್ಲಿರುವ ಸರ್ಕಾರಿ ಶಾಲೆಯ ಜಮೀನಿನ ಒಂದು ಪಾರ್ಶ್ವದಲ್ಲೇ ಈ ಹೊಸದಾದ ಕಚೇರಿ ನಿರ್ಮಾಣವಾಗುತ್ತಿದೆ. ಇದಕ್ಕೆ ಶಿಕ್ಷಣ ಸೌಧ ಎಂದು ಹೆಸರಿಡಲಾಗಿದ್ದು, ಸದ್ಯದಲ್ಲೇ ಅದು ಸೇವೆಗೆ ಸಿದ್ಧವಾಗಲಿದ್ದು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲು ಶಿಕ್ಷಣ ಪದ್ಧತಿಯಲ್ಲಿ ಪುತ್ತೂರಿಗೆ ದೊಡ್ಡ ಹೆಸರು ತರಲಿದೆ ಎಂದು ನಂಬಲಾಗಿದೆ. ಇದರಲ್ಲಿ ಬಿಇಒ ಕಚೇರಿಯ ಆವಶ್ಯಕತೆಗಳನ್ನು ರೂಪಿಸಿಕೊಂಡು, ಬಿಆರ್‌ಸಿ ಕಚೇರಿಗಳು, ತರಬೇತಿ ಕೊಠಡಿ, ಸಭಾಂಗಣ ಇತ್ಯಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆರಂಭಿಕ ಹಂತದಲ್ಲಿ ಕೇವಲ 80 ಲಕ್ಷ ರೂ. ಮಾತ್ರ ಮಂಜೂರಾದ ಕಾರಣ ನೆಲ ಮಹಡಿ ಮಾತ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು.