ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ- ಜಿ.ಪಂ. ಸಿ.ಇ.ಓ ಸೂಚನೆ

(ನ್ಯೂಸ್ ಕಡಬ) newskadaba.com ಅ. 22. ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅಕ್ಟೋಬರ್ 21 ರಿಂದ ನವೆಂಬರ್ 20 ರ ತನಕ ಹಮ್ಮಿಕೊಳ್ಳಲಾಗಿದ್ದು, ಈ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್‍ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ. ಸೂಚಿಸಿದ್ದಾರೆ.

ಅವರು ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಲಹೆ ನೀಡಿದರು. ಪ್ರತೀ ಬಾರಿಯಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೆ.ಎಂ.ಎಫ್ ಲಸಿಕೆದಾರರು ಪ್ರತೀ ಮನೆ ಮನೆಗೆ ತೆರಳಿ ರೈತರ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಕಾಲು ಬಾಯಿ ಜ್ವರ ರೋಗವು ವೈರಸ್‍ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಲಸಿಕೆ ನೀಡುವುದೊಂದೇ ಪರಿಣಾಮಕಾರಿಯಾದ ವಿಧಾನವಾಗಿದೆ ಎಂದರು.

Also Read  ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ

ಈ ಹಿಂದೆ ರೈತರು ತಮ್ಮ ಜಾನುವಾರುಗಳಿಗೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಪ್ರತೀ ಸುತ್ತಿನಲ್ಲಿ ಲಸಿಕೆ ಹಾಕಿಸುವುದು ರೋಗ ನಿಯಂತ್ರಣಕ್ಕೆ ಅವಶ್ಯವಾಗಿರುತ್ತದೆ.  ಜಿಲ್ಲೆಯಲ್ಲಿ ಸುಮಾರು 2.15 ಲಕ್ಷ ಜಾನುವಾರುಗಳಿದ್ದು, ಕಾಲು ಬಾಯಿ ಜ್ವರ ರೋಗದ ಲಸಿಕೆ ಹಾಕಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸರ್ವಸನ್ನದ್ದವಾಗಿದ್ದು, ರೈತರು ಹತ್ತಿರದ ಪಶುವೈದ್ಯಕೀಯ ಸಂಸ್ಥೆ/ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ನಿಗದಿತ ದಿನದಂದು ಜಾನುವಾರುಗಳನ್ನು ಮನೆಯಲ್ಲಿ ಕಟ್ಟಿ ಹಾಕಿ, ಲಸಿಕೆ ಹಾಕಲು ಬರುವ ಸಿಬ್ಬಂದಿಯೊಡನೆ ಸಹಕರಿಸಿಬೇಕು ಎಂದು ಹೇಳಿದರು. ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಅರುಣ್ ಕುಮಾರ್ ಶೆಟ್ಟಿ ಎನ್ ಹಾಗೂ ಇತರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

error: Content is protected !!
Scroll to Top