ಉಳ್ಳಾಲದಲ್ಲಿ ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟಿದ್ದು ದೇಶದ್ರೋಹದ ಕೃತ್ಯ- ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ದ.ಕ. ಸಂಸದ ಕ್ಯಾ. ಚೌಟ ಒತ್ತಾಯ

(ನ್ಯೂಸ್ ಕಡಬ) newskadaba.com ಅ. 22. ಮಂಗಳೂರು-ಕೇರಳ ಮಾರ್ಗವಾದ ಉಳ್ಳಾಲದ ತೊಕ್ಕೊಟ್ಟು ರೈಲ್ವೇ ಓವರ್‌ ಬ್ರಿಡ್ಜ್ ಹಳಿ ಮೇಲೆ ಕಲ್ಲುಗಳನ್ನು ಇಟ್ಟು ಅಪಾಯಕಾರಿ ಕೃತ್ಯವೆಸಗಿರುವುದು ಗಂಭೀರ ವಿಚಾರವಾಗಿದ್ದು, ಪೊಲೀಸರು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕ್ಯಾ. ಚೌಟ, ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟು ವಿಕೃತಿ ಮೆರೆದಿರುವ ಈ ಕೃತ್ಯದ ಬಗ್ಗೆ ಈಗಾಗಲೇ ನಾನು ಸಂಬಂಧಪಟ್ಟ ಪೊಲೀಸರು ಹಾಗೂ ರೈಲ್ವೆ ಇಲಾಖೆ ರಕ್ಷಣಾ ಪಡೆ(RPF) ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆಯುತ್ತಿದೆ. ರೈಲ್ವೆ ಇಲಾಖೆಗೆ ಸೇರಿದ ನಮ್ಮ ರಾಷ್ಟ್ರೀಯ ಸಂಪತ್ತಿನ ಮೇಲೆ ಈ ರೀತಿ ದಾಳಿ ಮಾಡಿ ಅದನ್ನು ಹಾನಿಗೊಳಿಸುವುದಕ್ಕೆ ಪ್ರಯತ್ನಿಸಿರುವುದು ದೇಶದ್ರೋಹದ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಕೂಡ ನಮ್ಮ ರಾಷ್ಟ್ರೀಯ ಸಂಪತ್ತುಗಳನ್ನು ನಮ್ಮ ಸೊತ್ತು ಎನ್ನುವ ರೀತಿಯಲ್ಲಿ ರಕ್ಷಿಸುವ ಕೆಲಸವನ್ನು ಮಾಡಬೇಕು. ಜತೆಗೆ ಸಮಾಜದಲ್ಲಿ ಈ ರೀತಿಯ ಮಾನಸಿಕತೆ ಹೊಂದಿರುವ ವ್ಯಕ್ತಿಗಳು ಯಾರಿದ್ದಾರೆಯೋ ಅಂಥಹ ದೇಶದ್ರೋಹಿಗಳನ್ನು ಗುರುತಿಸುವ ಕೆಲಸವನ್ನು ಜನತೆ ಕೂಡ ಮಾಡಬೇಕೆಂದು ಕ್ಯಾ. ಚೌಟ ಅವರು ಮನವಿ ಮಾಡಿದ್ದಾರೆ.

error: Content is protected !!

Join WhatsApp Group

WhatsApp Share