(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 16. ಅತಿವೇಗದ ಎರಡು ರೈಲುಗಳ ವಿನ್ಯಾಸ ಹಾಗೂ ತಯಾರಿಕೆಗೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಅಧೀನಕ್ಕೆ ಸೇರಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್) 866.87 ಕೋಟಿ ರು. ಮೌಲ್ಯದ ಗುತ್ತಿಗೆ ಲಭಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಮಂಗಳವಾರ ತಿಳಿಸಿದೆ.
ಪ್ರತಿ ರೈಲು ಎಂಟು ಬೋಗಿಗಳನ್ನು ಒಳಗೊಂಡಿದ್ದು, ಗಂಟೆಗೆ 280 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಮುಂಬೈ ಹಾಗೂ ಅಹಮದಾಬಾದ್ ನಡುವೆ ನಿರ್ಮಿಸಲಾಗುತ್ತಿರುವ ಅತಿವೇಗದ ರೈಲ್ವೆ ಕಾರಿಡಾರ್‌ನಲ್ಲಿ (ಬುಲೆಟ್ ರೈಲು ಯೋಜನೆ) 2027ರಿಂದ ಬಳಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಮಾದರಿಯ ಒಂದು ರೈಲಿನ ವೆಚ್ಚ 27.86 ಕೋಟಿಯಾಗಲಿದೆ. ಇದರ ವಿನ್ಯಾಸ, ಅಭಿವೃದ್ಧಿ ಸೇರಿ ಎಲ್ಲಾ ಅನುಭವಗಳನ್ನು ಬುಲೆಟ್ ರೈಲು ಅಭಿವೃದ್ಧಿಗೆ ಬಳಸಲಾಗುವುದು’ ಎಂದು ಹೇಳಿದೆ.