(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09. ಪಾವೂರು ಉಳಿಯ ಕುದ್ರು ಪರಿಸರದಲ್ಲಿ ವಾಸಿಸುತ್ತಿರುವ ನಾಗರಿಕರಿಗೆ, ಪರಿಸರಕ್ಕೆ ಹಾಗೂ ಇತರೆ ಸಂಪನ್ಮೂಲಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮತ್ತು ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಉಳಿಯ ದ್ವೀಪದ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಎಲ್ಲಾ ರೀತಿಯ ಮರಳುಗಾರಿಕೆಯನ್ನು ನಿಷೇಧಿಸಿ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್ ಆದೇಶ ಹೊರಡಿಸಿದ್ದಾರೆ.
ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಇತರೆ ಎಲ್ಲಾ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅನಧಿಕೃತ ದಕ್ಕೆಗಳಲ್ಲಿ ಮರಳು ಶೇಖರಿಸಿರುವುದನ್ನು ಮತ್ತು ವಾಹನಗಳಿಗೆ ಮರಳು ಹಂಚುವುದನ್ನು ಕೂಡ ತಕ್ಷಣದಿಂದ ನಿಷೇಧಿಸಲಾಗಿದೆ.
ನಿಷೇಧಿತ ಪ್ರದೇಶದ ವ್ಯಾಪ್ತಿ :
1)ಅಡ್ಯಾರು ಗ್ರಾಮದ ವಲಚ್ಚಿಲ್ ದಕ್ಕೆ, 2)ಅಡ್ಯಾರು ಗ್ರಾಮ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹಿಂಭಾಗದ ದಕ್ಕೆ, 3)ನದಿಯ, ದ್ವೀಪದ ಎಡಭಾಗದಲ್ಲಿರುವ ಪಾವೂರು ದಕ್ಕೆ
ಈ ನಿಷೇಧಾಜ್ಞೆಯನ್ನು ಉಲ್ಲಂಘಿಸುವ ಯಾವುದೇ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಸಂಬಂಧಿಸಿದವರ ವಿರುದ್ಧ ನಿಯಾಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.