(ನ್ಯೂಸ್ ಕಡಬ)newskadaba.com ಬಂಟ್ವಾಳ, ಅ. 04. ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಆಶ್ರಯದಲ್ಲಿ ಮಧ್ಯಪ್ರದೇಶದ ಮಂಡ್ಸೌರುನಲ್ಲಿ ಜರುಗಿದ ರಾಷ್ಟ್ರಮಟ್ಟದ ಈಜು ಚಾಂಪಿಯನ್ ಶಿಫ್ 2024ರಲ್ಲಿ ಇಂಡಿವಿಜುವಲ್ ಮೆಡ್ಲೆಯಲ್ಲಿ ಶ್ರೀ ರಾಮ ಪ್ರೌಢಶಾಲಾ ಕಲ್ಲಡ್ಕದ 9 ನೇ ತರಗತಿಯ ಅನರ್ಘ್ಯ ಎ.ಆರ್ ಅವರು 17 ರ ವರ್ಷ ಒಳಗಿನ ಹುಡುಗಿಯರ ಈಜು ಸ್ಫರ್ಧೆಯ 400ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಚಿನ್ನ, 200 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಬೆಳ್ಳಿ ಪದಕ ಪಡೆದು ಎಸ್ ಜಿ ಎಫ್ ಇಂಡಿಯ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ಅನನ್ಯ ಎ.ಆರ್ ಅವರು 14 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ 200 ಮೀ. ಬಟರ್ ಫ್ಲೈಯಲ್ಲಿ ಚಿನ್ನ ಪಡೆದು ಎಸ್ ಜಿ ಎಫ್ ಇಂಡಿಯ ಈಜು ಸ್ಫರ್ಧೆಗೆ ಆಯ್ಕೆ ಯಾಗಿರುತ್ತಾರೆ.
ಇವರಿಬ್ಬರು ಬಂಟ್ವಾಳ ತಾಲೂಕು ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಾಹಿಸುತ್ತಿರುವ ಅಶೋಕ ಕುಮಾರ್ ಬರಿಮಾರು ಮತ್ತು ಕೆಪಿಎಸ್‌ಸಿ ಮೊಂಟೆಪದವು ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೋಹಿಣಿ ದಂಪತಿಯ ಪುತ್ರಿಯರಾಗಿದ್ದಾರೆ. ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್ ಬಿ.ಕೆ ನಾಯ್ಕರವರ ಶಿಷ್ಯಯರಾಗಿದ್ದು ಅಲೋಷಿಯಸ್ ವಿವನ್ ಈಜು ಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ಸ್ಯಾಂಜುರವರಿಂದ ತರಬೇತಿ ಪಡೆಯುತ್ತಿದ್ದಾರೆ.