(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಮಾ.12. ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವದಾದ್ಯಂತ ವಿಶ್ವ ಕಿಡ್ನಿ ದಿನ ಎಂದು ಆಚರಿಸಲಾಗುತ್ತಿದೆ.
ಜಾಗತಿಕವಾಗಿ, ವಿಶ್ವದಾದ್ಯಂತ ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಅರಿವು ಜಾಗತಿ ಮೂಡಿಸಿ, ಜನರಲ್ಲಿ ಕಿಡ್ನಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. 2016ರಲ್ಲಿ 66 ದೇಶಗಳು ಈ ಆಚರಣೆಯನ್ನು ಜಾರಿಗೆ ತಂದರು. 2008ರಲ್ಲಿ 88 ದೇಶಗಳು ಈ ಆಚರಣೆಯಲ್ಲಿ ಭಾಗಿಯಾದರು. 2015ರಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳಿಗೆ ಈ ಆಚರಣೆ ವಿಸ್ತರಿಸಲಾಯಿತು. 2006ರಲ್ಲಿ ನಿಮ್ಮ ಕಿಡ್ನಿ ಸರಿಯಾಗಿದೆಯೇ? ಎಂಬ ಧ್ಯೇಯ ವಾಕ್ಯದಿಂದ ಆರಂಭವಾದ ಈ ಆಚರಣೆ 2015ರಲ್ಲಿ ಎಲ್ಲರಿಗೂ ಆರೋಗ್ಯವಂತ ಕಿಡ್ನಿ ಮತ್ತು 2016ರಲ್ಲಿ ಮಕ್ಕಳು ಮತ್ತು ಕಿಡ್ನಿ ರೋಗಗಳು, ಬೇಗನೆ ಕಾರ್ಯ ಪ್ರವೃತ್ತರಾಗಿ ಮತ್ತು ತಡೆಗಟ್ಟಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ಆಚರಣೆಯ ಹಿಂದಿನ ಉದ್ದೇಶಗಳು ಏನು?
- ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಿ, ಕಿಡ್ನಿಗಳಿಗೆ ಉಂಟಾಗುವ ತೊಂದರೆಗಳನ್ನು ತಡೆಗಟ್ಟುವ ಉದ್ದೇಶ.
- ಮಧುಮೆಹ ಮತ್ತು ಅಧಿಕ ರಕ್ತದೊತ್ತಡದ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಕಾಲ ಕಾಲಕ್ಕೆ ‘ಕಿಡ್ನಿ’ಯ ಕಾರ್ಯ ದಕ್ಷತೆಯನ್ನು ಪರೀಕ್ಷಿಸುವ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು.
- ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಲ್ಲಿ ಕಿಡ್ನಿ ದಾನ ಮತ್ತು ಕಿಡ್ನಿ ಕಸಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು.
- ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಕಿಡ್ನಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು.
- ಅನಗತ್ಯವಾಗಿ ಹೆಚ್ಚು ಬಳಸಲ್ಪಡುವ ನೋವು ನಿವಾರಕಗಳು ಮತ್ತು ರೋಗ ನಿರೋಧಕ ಔಷಧಿಗಳಿಂದ ಕಿಡ್ನಿಗಳಿಗೆ ಆಗುವ ತೋದರೆಗಳ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ನೀಡುವುದು.
- ಕಿಡ್ನಿ ಸಂಬಂಧಿ ರೋಗಗಳನ್ನು ಆರಂಭಿಕ ಹಂತದಲ್ಲಿ ತಡೆಯಲು ಬೇಕಾದ ತುರ್ತು ಕ್ರಮಗಳಾದ ಜೀವನ ಶೈಲಿ ಬದಲಾವಣೆ, ಆಹಾರ ಪದ್ದತಿಯ ಬದಲಾವಣೆ, ಧೂಮಪಾನ ವರ್ಜನೆ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವುದು.
ಕಿಡ್ನಿ ರೋಗದ ಚಿಹ್ನೆಗಳು ಏನು? ಕಿಡ್ನಿ ನಮ್ಮ ದೇಹದ ಅತ್ಯಂತ ಪ್ರಾಮುಖ್ಯವಾದ ಅಂಗ. ಮನುಷ್ಯನಿಗೆ ಒಟ್ಟು ಎರಡು ಕಿಡ್ನಿಗಳಿರುತ್ತದೆ. ಇವೆರಡು ದಿನವಿಡಿ ಕೆಲಸ ಮಾಡುತ್ತಿರುತ್ತದೆ. ಕಿಡ್ನಿ ನಮ್ಮ ದೇಹದ ಫಿಲ್ಟರ್ ಇದ್ದಂತೆ. ನಮ್ಮ ಶರೀರದ ಕೆಲಸಗಳಿಗೆ ಪೂರಕವಾದ ರಾಸಾಯನಿಕಗಳನ್ನು ಬಳಸಿಕೊಂಡು, ಬೇಡವಾದ ವಸ್ತುಗಳನ್ನು ದೇಹದಿಂದ ಹೊರತಳ್ಳುವ ಕೆಲಸ ಕಿಡ್ನಿ ನಿರಂತರವಾಗಿ ಮಾಡುತ್ತಿರುತ್ತದೆ. ಕೇವಲ 150 ಗ್ರಾಮ್ ತೂಕದ ಈ ಕಿಡ್ನಿ ಗಾತ್ರದಲ್ಲಿ ಚಿಕ್ಕದಾದರೂ, ಮಾಡುವ ಕೆಲಸ ಮಾತ್ರ ಊಹೆಗೂ ನಿಲುಕದು. ಹೃದಯದಷ್ಟೇ ಪ್ರಮುಖವಾದ ಇನ್ನೊಂದು ಅಂಗವೆಂದರೆ ಕಿಡ್ನಿ ಎಂದರೂ ತಪ್ಪಾಗಲಿಕ್ಕಿಲ್ಲ. ಕಿಡ್ನಿಯ ಕೆಲಸದಲ್ಲಿ ಸ್ವಲ್ಪ ಏರುಪೇರು ಆದರೂ ದೇಹದ ಎಲ್ಲಾ ಆಂತರಿಕ ವ್ಯವಸ್ಥೆಗಳು ಅಲ್ಲೋಲಕಲ್ಲೋಲವಾಗುತ್ತದೆ. ಸಾಮಾನ್ಯವಾಗಿ ಕಿಡ್ನಿ ಸಂಬಂಧಿ ರೋಗಗಳ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಕಂಡು ಹಿಡಿಯುವುದು ಕಷ್ಟವಾಗಬಹುದು. ರೋಗದ ತೀವ್ರತೆ ಹೆಚ್ಚಿದಂತೆಲ್ಲ ಕಿಡ್ನಿ ರೋಗದ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಬಹುದು. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ದೇಹದಲ್ಲಿ ಕಲ್ಮಷಗಳು ಹೆಚ್ಚಾಗಿ ವಿಪರೀತ ಸುಸ್ತು, ಹಸಿವಿಲ್ಲದಿರುವುದು, ಬೇಗನೆ ಸುಸ್ತಾಗುವುದು, ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು, ಮೊಣಕಾಲು ಊದಿಕೊಳ್ಳುವುದು, ಬೆಳಗ್ಗಿನ ಹೊತ್ತು ಮುಖ ಊದಿಕೊಳ್ಳುವುದು, ಮೂತ್ರದಲ್ಲಿ ರಕ್ತ ಒಸರುವುದು, ಮೂತ್ರದ ಬಣ್ಣ ಹೆಚ್ಚು ದಪ್ಪವಾಗುವುದು, ಮೂತ್ರದಲ್ಲಿ ಅಲ್ಬುಮಿನ್ ಎಂಬ ಪ್ರೋಟಿನ್ನ ಅಂಶ ಹೆಚ್ಚಾಗುವುದು, ನೊರೆಯುಕ್ತ ಮೂತ್ರ, ಮೂತ್ರದ ಪ್ರಮಾಣ ಕಡಿಮೆಯಾಗುವುದು, ರಾತ್ರಿ ಹೊತ್ತು ಹೆಚ್ಚು ಮೂತ್ರ ಬರುವುದು ಮತ್ತು ಪದೇ ಪದೇ ಮೂತ್ರ ಮಾಡುವುದು, ಹೊಟ್ಟೆಯ ಸುತ್ತ ಕಿಬ್ಬೊಟ್ಟೆಯ ಬಳಿ ನೋವು, ನಿದ್ರಾಹೀನತೆ, ತಲೆನೋವು, ಉಸಿರಾಟದಲ್ಲಿ ಏರುಪೇರು, ಅಧಿಕ ರಕ್ತದೊತ್ತಡ, ವಾಕರಿಕೆ ಬಂದಂತಾಗುವುದು ಮತ್ತು ವಾಂತಿ, ಬಾಯಿಯಲ್ಲಿ ವಿಪರೀತ ವಾಸನೆ ಮತ್ತು ಬಾಯಿ ಒಣಗಿದಂತಾಗುವುದು. ಸಾಮಾನ್ಯವಾಗಿ ಸ್ನಾಯಖಂಡಗಳ ಸಂಚಲನದಿಂದ ಉಂಟಾಗುವ ಅನಗತ್ಯವಾದ ವಸ್ತುವಾದ ‘ಕ್ರಿಯಾಟೆನಿನ್’ ರಕ್ತಕ್ಕೆ ಸೇರುತ್ತದೆ. ಇದನ್ನು ಕಿಡ್ನಿ ತನ್ನ ಕಾರ್ಯ ದಕ್ಷತೆಯಿಂದ ಮೂತ್ರದ ಮುಖಾಂತರ ಹೊರಹಾಕುತ್ತದೆ. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ರಕ್ತದಲ್ಲಿ ಈ ‘ಕ್ರಿಯಾಟೆನಿನ್’ ಅಂಶ ಜಾಸ್ತಿಯಾಗಿ ಕಿಡ್ನಿ ಮೇಲೆ ತಿಳಿಸಿದ ಕಿಡ್ನಿ ರೋಗದ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ದೇಹದಲ್ಲಿನ ವಿವಿಧ ಜೀವಕೋಶಗಳ ಜೀವಕ್ರಿಯೆಯಿಂದಾಗಿ ಉತ್ಪತಿಯಾಗುವ ಯಾರಿಯಾ, ನೈಟ್ರೋಜನ್ ಮತ್ತು ಯೂರಿಕ್ ಆಸಿಡ್ ಮುಂತಾದ ಕಲ್ಮಷಗಳನ್ನು ಕೂಡಾ ಕಿಡ್ನಿ ಮೂತ್ರದ ಮುಖಾಂತರ ದೇಹದಿಂದ ಹೊರಹಾಕಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಈ ಅಂಶಗಳು ರೋಗಿಯ ರಕ್ತದಲ್ಲಿ ಹೆಚ್ಚಿದಂತೆ ಬೇರೆ ಬೇರೆ ರೀತಿಯಲ್ಲಿ ರೋಗಿಯನ್ನು ಕಾಡಿ ವ್ಯಕ್ತಿಯನ್ನು ನಿಜವಾಗಿಯೂ ಬಳಲುವಂತೆ ಮಾಡಿ ಜೀವನೋತ್ಸಹವನ್ನು ಬತ್ತಿಸಿ, ಆತನನ್ನು ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಮಾಡುತ್ತದೆ. ಆರಂಭಿಕ ಹಂತದಲ್ಲಿಯೇ ಈ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಿದ್ದಲ್ಲಿ ಪರಿಣಾಮಕಾರಿಯಾಗಿ ರೋಗವನ್ನು ನಿಯಂತ್ರಿಸಬಹುದು.
ಕಿಡ್ನಿ ಸಂಬಂಧಿ ರೋಗವನ್ನು ತಡೆಯುವುದು ಹೇಗೆ? ಮೂತ್ರಪಿಂಡದ ಕಾಯಿಲೆ, ನಮಗರಿವಿಲ್ಲದೆಯೇ ನಿಧಾನವಾಗಿ ಕೊಲ್ಲುವ ಕಾಯಿಲೆಯಾಗಿದ್ದು ಜೀವನಶೈಲಿ ಮೇಲೆ ನೇರ ಸಂಬಂಧ ಹೊಂದಿರುತ್ತದೆ. ಹೆಚ್ಚಿನ ಮೂತ್ರಪಿಂಡ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
- ರನ್ನಿಂಗ್, ಬಿರುಸುನಡಿಗೆ, ಸೈಕಲ್ ತುಳಿತ ಮತ್ತಿತರ ದೈಹಿಕ ಕಸರತ್ತುಗಳಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿ ಕಿಡ್ನಿಯನ್ನು ಕ್ರೀಯಾಶೀಲವಾಗಿರಿಸುವುದು.
- ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸಿ ಡಯಾಬಿಟಿಸ್ನಿಂದ ಮುಕ್ತವಾದಲ್ಲಿ ಕಿಡ್ನಿಯ ಸಮಸ್ಯೆಗಳು ಖಂಡಿತವಾಗಿ ಬರಲಾರದು. ದಿನಕ್ಕೆ ಏನಿಲ್ಲವೆಂದರೂ 3ರಿಂದ 4ಲೀಟರ್ ನೀರು ಸೇವಿಸಿದ್ದಲ್ಲಿ ಕಿಡ್ನಿಯಲ್ಲಿನ ಲವಣಾಂಶ ಮತ್ತು ವಿಷಕಾರಕ ತ್ಯಾಜ್ಯಗಳು ಸೋಸಿ ಹೋಗುತ್ತದೆ ಮತ್ತು ಕಿಡ್ನಿಯು ಯಾವತ್ತೂ ಕ್ರೀಯಾಶೀಲವಾಗಿರುತ್ತದೆ. ನೀರಿನ ಅಥವಾ ದ್ರವಾಹಾರದ ಅಂಶ ಕಡಿಮೆಯಾದಂತೆಯೇ ಕಿಡ್ನಿಯಲ್ಲಿ ಕಲ್ಲುಗಳು ಮತ್ತು ರೋಗಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಮಾಂಸಾಹಾರ ಮತ್ತು ಉಪ್ಪು ಕಿಡ್ನಿ ಖಾಯಿಲೆಗಳನ್ನು ಆಮಂತ್ರಿಸುತ್ತದೆ.
- ಧೂಮಪಾನ, ಮಧ್ಯಪಾನದಿಂದ ದೂರವಿರುವುದು. ಇವು ಬರೀ ಕಿಡ್ನಿಯ ಆರೋಗ್ಯಕಷ್ಟೆಯಲ್ಲ, ದೇಹದ ಎಲ್ಲಾ ಅಂಗಾಗಗಳ ಆರೋಗ್ಯಕ್ಕೆ ಅತೀ ಅವಶ್ಯಕ.
- ದೇಹದ ತೂಕದ ಮೇಲೆ ನಿಯಂತ್ರಣ ಇಡುವುದು ಹೆಚ್ಚಿನ ರೋಗಗಳು ದೇಹದ ತೂಕ, ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಮೇಲೆ ಅವಲಂಭಿಸಿರುತ್ತದೆ. ದೇಹದ ತೂಕವನ್ನು ದೇಹದ ಎತ್ತರಕ್ಕೆ ಅನುರೂಪವಾಗಿ ಇಟ್ಟುಕೊಂಡಲ್ಲಿ ಹೆಚ್ಚಿನ ರೋಗಗಳನ್ನು ತಡೆಯಬಹುದು.
- ಔಷಧಿಗಳನ್ನು ಅತಿಯಾಗಿ ಸೇವಿಸುವುದನ್ನು ನಿಲ್ಲಿಸಬೇಕು. ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸಬಾರದು. ಅತಿಯಾದ ನೋವು ನಿವಾರಣೆಗಳ ಸೇವನೆ ಕಿಡ್ನಿ ಮತ್ತು ಲಿವರ್ನ ಆರೋಗ್ಯಕ್ಕೆ ಮಾರಕವಾಗಬಲ್ಲದು.
- ನಿರಂತರವಾಗಿ, ಕಾಲ ಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಅತೀ ಅವಶ್ಯಕ. ನೋವಿದ್ದಾಗ ಮಾತ್ರ ವೈದ್ಯರ ಬಳಿ ಹೋಗುವ ಪರಿಪಾಠ ಒಳ್ಳೆಯದಲ್ಲ, ಯಾಕೆಂದರೆ ಹೆಚ್ಚಿನ ಕಿಡ್ನಿಯ ಸಂಬಂಧಿ ಕಾಯಿಲೆಗಳು ನೋವು ಬರುವ ಹಂತಕ್ಕೆ ಬಂದಾಗ ಕಿಡ್ನಿಗಳಿಗೆ ಹೆಚ್ಚಿನ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಕೊನೆ ಮಾತು: ಕಿಡ್ನಿ ನಮ್ಮ ದೇಹದ ಅತೀ ಮುಖ್ಯವಾದ ಅಂಗ. ಎರಡು ಕಿಡ್ನಿಗಳಿದ್ದರೂ, ಒಂದು ಕಿಡ್ನಿ ತೆಗೆದರೂ ಇನ್ನೊಂದು ಕಿಡ್ನಿ ನಿರಂತರವಾಗಿ ಕೆಲಸ ಮಾಡುವ ಸಾಮಥ್ರ್ಯ ಹೊಂದಿದೆ. ಕಿಡ್ನಿಯಲ್ಲಿನ ಸೂಕ್ಷ್ಮವಾದ ರಕ್ತನಾಳಗಳು, ರಕ್ತದಿಂದ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಶೋಧಕದಂತೆ ಕಾರ್ಯ ನಿರ್ವಹಿಸುತ್ತದೆ. ಕಿಡ್ನಿ ಚೆನ್ನಾಗಿದ್ದರೆ ಅದು ಶರೀರದಲ್ಲಿನ ನೀರಿನ ಅಂಶದ ಸಮತೋಲನ ಕಾಪಾಡುತ್ತದೆ. ರಕ್ತದೊಳಗಿನ ಕಲ್ಮಶಗಳನ್ನು ಸೋಸಿ ಮೂತ್ರವಾಗಿ ಹೊರ ಹಾಕುತ್ತದೆ. ಆಹಾರದಲ್ಲಿನ ಸತ್ವಗಳನ್ನು ಬಳಸಿಕೊಂಡು ದೇಹದ ಆಂತರಿಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಮೂತ್ರಪಿಂಡದ ಆರೋಗ್ಯ ಕೆಟ್ಟಲ್ಲಿ ರಕ್ತದಲ್ಲಿನ ಕಲ್ಮಶಗಳಾದ ಕ್ರೀಯಾಟೆನಿನ್ ಎಂಬ ಅಂಶ ಜಾಸ್ತಿಯಾಗುತ್ತದೆ. ಆದೇ ರೀತಿ ರಕ್ತದಲ್ಲಿನ ಯೂರಿಯಾ ನೈಟ್ರೋಜನ್ (ಃಗಓ) ಎಂಬ ಅಂಶವು ಜಾಸ್ತಿಯಾಗುತ್ತದೆ. ಈ ಎರಡು ಪರೀಕ್ಷೆಗಳ ಮುಖಾಂತರ ಕಿಡ್ನಿಯ ಕಾರ್ಯಕ್ಷಮತೆವನ್ನು ಪರೀಕ್ಷಿಸಲಾಗುತ್ತದೆ. ಇವೆರಡು ರಕ್ತದಲ್ಲಿ ಅಧಿಕವಾದಲ್ಲಿ ಕಿಡ್ನಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದರ್ಥ. ಒಟ್ಟಿನಲ್ಲಿ ಕಿಡ್ನಿ ಎನ್ನುವುದು ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಫಿಲ್ಟರ್ ಇದ್ದಂತೆ. ಮನೆಯಲ್ಲಿನ ಫಿಲ್ಟರ್ ಹೇಗೆ ಕೆಲವೊಮ್ಮೆ ಏರುಪೇರಾಗಿ ಕೆಲಸ ಮಾಡುವುದೋ ಹಾಗೆಯೇ ತಮ್ಮೊಳಗಿನ ಕಿಡ್ನಿ ಕೂಡ. ಇದನ್ನು ಎಷ್ಟು ಚೆನ್ನಾಗಿ ಆರೋಗ್ಯಕಾರವಾಗಿ ನೋಡಿಕೊಳ್ಳುತ್ತೇವೆಯೋ, ಅಷ್ಟು ವರ್ಷ ನಾವು ಆರೋಗ್ಯವಂತರಾಗಿ ಬಾಳಬಹುದು. ಒಟ್ಟಿನಲ್ಲಿ ಕಿಡ್ನಿ ಎನ್ನುವ 150 ಗ್ರಾಂ. ನ ಎರಡು ಅಂಗಗಳು ಗಾತ್ರದಲ್ಲಿ ಚಿಕ್ಕದಾದರೂ, ಮಾಡುವ ಕೆಲಸವಂತೂ ಊಹೆಗೂ ನಿಲುಕದು ಮತ್ತು ಆದರ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಮಾತ್ರ ನಾವು ನೂರುಕಾಲ ಸುಖವಾಗಿ ಬದುಕಬಹುದು.
ಡಾ|ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ