(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.09. ಈಗಿನ ಮಹಿಳೆಯರು ಗಂಡಸರಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲವಾದ್ದರಿಂದ ಮಹಿಳೆಯರು ಮೀಸಲಾತಿಯನ್ನೇ ಅವಲಂಬಿಸಿ ಇರಬಾರದು ಹಾಗೂ ಎಲ್ಲಾ ಮಹಿಳೆಯರು ಗಂಡಸರಿಗೆ ಸರಿಸಮಾನವಾಗಿ ಬೆಳೆಯಬೇಕು. ಗಂಡು ಹೆಣ್ಣಿನ ನಡುವೆ ತಾರತಮ್ಯ ಬೇಡ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ದ.ಕ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ರವಿ ಮಾತನಾಡಿ, ಮಹಿಳೆಯರನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ವೈಭವಿಕರಿಸುವುದು ಸಾಮಾನ್ಯವಾದ ವಿಷಯವಾಗಿದೆ. ವಿವೇಕ ಎನ್ನುವುದು ಇವತ್ತಿನ ಹೆಣ್ಣು ಮಕ್ಕಳಲ್ಲಿ ಕಾಣುತ್ತಿಲ್ಲ. ನಮ್ಮ ತಾಯಿಯಲ್ಲಿರುವ ಎದೆಗಾರಿಕೆ, ಧೈರ್ಯ, ಆತ್ಮಾವಿಶ್ವಾಸ ಈಗಿನ ವಿದ್ಯಾವಂತ ಹೆಣ್ಣು ಮಕ್ಕಳಲ್ಲಿ ಕಾಣದಾಗಿದೆ. ಗಂಡು ವೀರಾಧಿ ವೀರನಾಗಿ ದೊಡ್ಡ ದೊಡ್ಡ ಯುಧ್ದಗಳನ್ನು ಗೆದ್ದರೂ, ಸಾಕಷ್ಟು ಸಾಧನೆಗಳನ್ನು ಮಾಡಿದರೂ ಮಹಿಳೆಯರಿಗಿರುವ ಅದ್ಭುತ ಶಕ್ತಿ ಅವನಿಗಿಲ್ಲ. ಒಂದು ಮಗುವಿಗೆ ಜನ್ಮನಿಡುವ ಶಕ್ತಿ ಹೆಣ್ಣಿಗೆ ಮಾತ್ರ ಇರುವುದು. ಪುರುಷ ಅಹಂಕಾರವನ್ನು ಗೆಲ್ಲಲು ಒಬ್ಬ ಮಹಿಳೆಗೆ ಮಾತ್ರ ಸಾಧ್ಯ. ಹೆಣ್ಣಿಗೆ ಅಹಂಕಾರ ಶ್ರೇಯಸ್ಸಲ್ಲ ಅದು ಸಂಸಾರವನ್ನು ಹಾಳುಮಾಡುತ್ತದೆ. ಸಂಸಾರದಲ್ಲಿ ಹಠ ಬೇಡ. ಆದರೆ ಗುರಿ ಸಾಧನೆಗೆ ಹಠ ಇರಬೇಕು. ಇಂದು ಸಂಸ್ಕಾರಯುತ, ದೇಶವನ್ನು ಕಟ್ಟುವಂತಹ ಹೆಣ್ಣು ಮಗಳ ಅವಶ್ಯಕತೆ ಈ ಸಮಾಜಕ್ಕೆ ಇದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬರಹಗಾರರಾದ ಅ.ನಾ. ಪೂರ್ಣಿಮಾ ಮಾತನಾಡಿ, ಇಂದಿನ ವಿಶ್ವ ಮಹಿಳಾ ದಿನಾಚರಣೆಯನ್ನು “ಅಭಿವೃದ್ಧಿಗಾಗಿ ಒತ್ತಾಯ” ಎಂಬ ಘೋಷಣೆ ಅಡಿಯಲ್ಲಿ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆಯಬೇಕು. ಶೋಷಣೆಯ ವಿರುಧ್ಧ ಮೆಟ್ಟಿ ನಿಲ್ಲುವ ಶಕ್ತಿಯನ್ನು ಮೈಗೂಡಿಸಬೇಕು. ಪ್ರಪಂಚದ ಎಲ್ಲಾ ಮೂಲಗಳಲ್ಲಿಯು ಮಹಿಳೆ ಇದ್ದಾಳೆ ಎ.ಸಿ ರೂಂ ನಿಂದ ಹಿಡಿದು ಕೂಲಿಕಾರ್ಮಿಕಳಾಗಿ, ಬೀದಿ ಬದಿ ವ್ಯಾಪಾರಸ್ಥೆಯಾಗಿ, ಆಟೋ ಚಾಲಕಿಯಾಗಿ, ವೈದ್ಯಳಾಗಿ, ವಕೀಲೆಯಾಗಿ, ಹೆಣ ಸುಡುವ ಕೆಲಸಕ್ಕೂ ಸರಿ ಎನ್ನುವ ಮಟ್ಟಕ್ಕೆ ದಾಪುಗಾಲು ಇಟ್ಟಿದ್ದಾಳೆ. ಎಲ್ಲಾ ರೀತಿಯಲ್ಲಿ ಸಾಧನೆ ಮಾಡಿದರೂ ಅವಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಮಹಿಳೆಯರು ತಮ್ಮಲ್ಲಿಯೇ ಜಾಗೃತಿಯನ್ನು ಮೂಡಿಸಬೇಕು. ಇಂದು ಮಹಿಳೆಯರಿಗೆ ವಿವಾಹದ ನಂತರವು ವಿದ್ಯಾಭ್ಯಾಸಕ್ಕಾಗಿ ಅವರ ಮಾವ ಮತ್ತು ಗಂಡ ಪ್ರೋತ್ಸಾಹಿಸುತ್ತಾರೆ. ಇಂತಹ ವ್ಯಕ್ತಿಗಳು ಮಹಿಳೆಯರ ಪಾಲಿಗೆ ವರದಾನ. ಮಹಿಳಾ ಅಭಿವೃದ್ಧಿಗೆ ಗಂಡು ಹೆಣ್ಣು ಇಬ್ಬರೂ ಶ್ರಮಿಸಬೇಕು. ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಧಕರಾದ ಕುಮಾರಿ ಕಸ್ತೂರಿ (ಸಂಗೀತ ಕ್ಷೇತ್ರ), ಈಶ್ವರಿ ಸ್ತ್ರೀಶಕ್ತಿ ಗುಂಪು (ಈರೆಕೋಡಿ,ಬಂಟ್ವಾಳ), ವೇದಾವತಿ(ಏಣಿತಡ್ಕ-1 ಅಂಗನವಾಡಿ ಕೇಂದ್ರ,ಪುತ್ತೂರು), ವನಿತಾ (ಕೊಳಲ ಬಾಕಿಮಾರು, ಅಂಗನವಾಡಿ ಕೇಂದ್ರ,ಬಂಟ್ವಾಳ), ರೇಣುಕಾ (ಬಡಕಬೈಲು ಅಂಗನವಾಡಿ ಕೇಂದ್ರ, ಬಂಟ್ವಾಳ), ಸುಲೋಚನ (ಬೆಳ್ಳಾರೆ, ಅಂಗನವಾಡಿ ಕೇಂದ್ರ, ಸುಳ್ಯ) ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೃಷ್ಟಿದೋಷವುಳ್ಳ 10 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಟಾಕಿಂಗ್ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಂದರ್ ಪೂಜಾರಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಉಸ್ಮಾನ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಅಧ್ಯಕ್ಷೆ ಶಕುಂತಲಾ ಮತ್ತು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯಮುನ ಉಪಸ್ಥಿತರಿದ್ದರು.