ತರಬೇತಿ ಅವಧಿಯ ಶಿಷ್ಯ ವೇತನ- ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು ಸೆ. 24. ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2024-25ನೇ ಸಾಲಿನಲ್ಲಿ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯ ವೇತನ ಆಯ್ಕೆಗಾಗಿ ಆನ್‍ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30ರ ವರೆಗೆ ಅವಧಿ ವಿಸ್ತರಿಸಲಾಗಿದೆ. ಅರ್ಜಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ವೆಬ್‍ ಸೈಟ್ www.sw.kar.nic.in ನಲ್ಲಿ ಆನ್‍ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಬಂಧನೆಗಳು:
ಅಭ್ಯರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 2. 50ಲಕ್ಷ ಮೀರಿರಬಾರದು. ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು 40 ವರ್ಷ ಆಗಿರಬೇಕು. ವಕೀಲ ವೃತ್ತಿಯನ್ನು ನಡೆಸಲು ಅರ್ಹರಾದವರು ಕಾನೂನು ಪದವಿ ಪಾಸಗಿರಬೇಕು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅಪೂರ್ಣ ಅರ್ಜಿ, ತಡವಾಗಿ ಬಂದ ಅರ್ಜಿ ಮತ್ತು ನಿಬಂಧನೆಗಳನ್ನು ಪೂರೈಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಹ ಅರ್ಜಿಗಳ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ನಿಗದಿತ ಅರ್ಜಿ ನಮೂನೆಯೊಂದಿಗೆ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಪ್ರಮಾಣ ಪತ್ರಗಳ ದೃಢೀಕರಣ ಪತ್ರಗಳನ್ನು ಲಗತ್ತೀಕರಿಸಿರಬೇಕು. ದಕ್ಷಿಣ ಕನ್ನಡ ಜಿಲ್ಲೆಯವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ತರಬೇತಿಯ ವಿವರ:
ಈ ತರಬೇತಿಯ ಅವಧಿಯು 2 ವರ್ಷಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಮಾಹೆಯಾನ ರೂ.10,000/- ಶಿಷ್ಯ ವೇತನವನ್ನು ಈ ಅವಧಿಯಲ್ಲಿ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಆಯ್ಕೆ ಸಮಿತಿಯು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಸರಕಾರಿ ವಕೀಲರು ಅಥವಾ ಕನಿಷ್ಟ 15 ವರ್ಷಗಳ ವಕೀಲ ವೃತ್ತಿಯಲ್ಲಿ ಅನುಭವವುಳ್ಳ ವಕೀಲರ ಅಧೀನದಲ್ಲಿ ತರಬೇತಿಗೆ ನಿಯೋಜಿಸಲಾಗುತ್ತದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಯು ತಾವು ಆಯ್ಕೆಯಾದ 15 ದಿನದ ಒಳಗೆ ಅಂಗೀಕಾರವನ್ನು ನಿಗದಿತ ಸಮಯದೊಳಗೆ ತಿಳಿಸದಿದ್ದಲ್ಲಿ ಅವರ ಆಯ್ಕೆಯನ್ನು ರದ್ದುಪಡಿಸಲಾಗುತ್ತದೆ ಹಾಗೂ ಇವರ ಬದಲಿಗೆ ವೈಟಿಂಗ್ ಲಿಸ್ಟ್‍ ನಲ್ಲಿರುವ ಬೇರೆ ಅರ್ಹ ಅಭ್ಯರ್ಥಿಗಳನ್ನು ಅರ್ಹತೆಗನುಸಾರವಾಗಿ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಯು ತರಬೇತಿಗೆ ಹೋಗುವ ಮುಂಚೆ ತಾನು ಈ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟುಹೋಗುವುದಿಲ್ಲವೆಂದು ಹಾಗೂ ಈ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟು ಹೋದಲ್ಲಿ ತರಬೇತಿಯ ಒಟ್ಟು ವೆಚ್ಚವನ್ನು ಹಾಗೂ ವೆಚ್ಚಕ್ಕೆ ಶೇ.10ರಂತೆ ಬಡ್ಡಿಯನ್ನು ಸರಕಾರಕ್ಕೆ ಪಾವತಿ ಮಾಡಲು ತಮ್ಮ ಒಪ್ಪಿಗೆ ಇರುತ್ತದೆ ಎಂಬುದಕ್ಕೆ ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದಲ್ಲಿ ಬರೆದು ಕೊಡಬೇಕಾಗುತ್ತದೆ. ಸುಳ್ಳು ಮಾಹಿತಿ ಹಾಗೂ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ ಅಭ್ಯರ್ಥಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.

ಆನ್‍ಲೈನ್ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು, ಪೂರಕ ದಾಖಲೆಗಳೊಂದಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಾಗಿದ್ದಲ್ಲಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಭವನ, ಅಂಗಡಿಗುಡ್ಡೆ, ಉರ್ವಸ್ಟೋರ್ಸ್, ಅಶೋಕನಗರ ಅಂಚೆ, ಮಂಗಳೂರು ಅಥವಾ ಸಂಬಂಧಪಟ್ಟ ತಾಲೂಕಿನಲ್ಲಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group