ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದೀರಾ..? ► ಹಾಗಾದರೆ ನಿಮಗೆ ಕಾದಿದೆ ಕ್ರಿಮಿನಲ್ ಕೇಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.08. ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಲ್ಲಿ, ಪಡಿತರ ಸಾಮಾಗ್ರಿಗಳ ಪೂರ್ಣ ಮೊಬಲಗನ್ನು ವಸೂಲಿ ಮಾಡುವುದರೊಂದಿಗೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಎ.ಟಿ. ಜಯಪ್ಪ ಎಚ್ಚರಿಸಿದ್ದಾರೆ.

ಸರಕಾರವು ಬಡಜನರ ಅನುಕೂಲಕ್ಕಾಗಿ “ತಕ್ಷಣ ಪಡಿತರ ಚೀಟಿ ವಿತರಣೆ“ ಯೋಜನೆಯನ್ನು ಜಾರಿಗೆ ತಂದಿದ್ದು, ಫೆಬ್ರವರಿ 23 ರಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಬಿಪಿಎಲ್ ಪಡಿತರ ಚೀಟಿ ಪಡೆಯಲು ರೂ.1.20 ಲಕ್ಷದ ಒಳಗೆ ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು ಸರಕಾರವು ನಿಗದಿ ಪಡಿಸಿರುತ್ತದೆ. ಆದರೆ ಕೆಲವು ಅರ್ಜಿಗಳನ್ನು ಪರಿಶೀಲಿಸಲಾಗಿ ಆದಾಯದ ಬಗ್ಗೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆಯುತ್ತಿರುವುದು/ಪಡೆಯಲೆತ್ನಿಸುತ್ತಿರುವುದು ಕಂಡು ಬಂದಿರುತ್ತದೆ. ಇದಲ್ಲದೆ ಬಿಪಿಎಲ್ ಪಡಿತರ ಚೀಟಿ ಪಡೆಯುವ ಉದ್ದೇಶಕ್ಕಾಗಿಯೇ ಕುಟುಂಬವನ್ನು ವಿಂಗಡಿಸಿ ಒಂದೇ ವಿಳಾಸದಲ್ಲಿದ್ದು ಪ್ರತ್ಯೇಕ ಅರ್ಜಿ ಸಲ್ಲಿಸುತ್ತಿರುವುದು ಕೂಡಾ ಕಂಡುಬಂದಿದೆ. ವೃತ್ತಿ ತೆರಿಗೆ, ಸೇವಾ ತೆರಿಗೆ ಮತ್ತು ವ್ಯಾಟ್ ಪಾವತಿಸುವ ಯಾವುದೇ ಕುಟುಂಬಗಳು/ಸರಕಾರಿ ನೌಕರರು/ಅರೆ ಸರಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹರಾಗಿದ್ದು, ಒಂದು ವೇಳೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಲ್ಲಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಮೂಲಕ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಪತ್ನಿಯ ರೀಲ್ಸ್ ಹುಚ್ಚಾಟದಿಂದ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ ಪತಿ..!

error: Content is protected !!
Scroll to Top