(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.07. ಅಡಿಕೆ ಗೋಡೌನ್‌ಗಳನ್ನು ದರೋಡೆ ಮಾಡಲು ಸಿದ್ದತೆ ನಡೆಸಿ ಹೊಂಚು ಹಾಕುತ್ತಿದ್ದ ಕುಖ್ಯಾತ ಅಡಿಕೆ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪುತ್ತೂರು ನಗರ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಸಹಿತ ಎಂಟು ಮಂದಿಯನ್ನು ಬಂಧಿಸಿದ ಘಟನೆ ಬುಧವಾರದಂದು ನಡೆದಿದೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಪಿಲ್ಚಾಂಡಿ ಕಲ್ಲು ಅದ್ರಾಮರವರ ಪುತ್ರ ಮೊಹಮ್ಮದ್ ರಫೀಖ್(32), ಕುವೆಟ್ಟು ಬರಾಯ ಅಬ್ದುಲ್ ಹಮೀದ್‌ರವರ ಪುತ್ರ ಮಹಮ್ಮದ್ ಇಸಾಖ್(32), ಕುವೆಟ್ಟು ಗ್ರಾಮದ ಶಿವಾಜಿನಗರ ಹಸೈನಾರ್‌ರವರ ಪುತ್ರ ಉಮ್ಮರ್ ಫಾರೂಕ್(30), ಕುವೆಟ್ಟು ಪಿಲ್ಚಾಂಡಿಕಲ್ಲು ಹಮೀದ್‌ರವರ ಪುತ್ರ ಎಚ್. ಇರ್ಷಾದ್(21), ಕುವೆಟ್ಟು ಬದ್ಯಾರ್ ಹೌಸ್ ಅಬ್ಬಾಸ್‌ರವರ ಪುತ್ರ ಉಮ್ಮರ್(31), ಪಡಂಗಡಿ ಗ್ರಾಮದ ಅಂಜಿಲ್ ಮಾರ್ ಹೈಡ್ರೋಸ್‌ರವರ ಪುತ್ರ ಹಮೀದ್(38), ಉಡುಪಿ ಜಿಲ್ಲೆ ಕಾಡೂರು ಬಾಯಾರುಬೆಟ್ಟು ತಂತ್ರೇಡಿ ಭಾಸ್ಕರ ಶೆಟ್ಟಿ ಪುತ್ರ ವಿಜಯ ಶೆಟ್ಟಿ(23) ಹಾಗೂ ಮೂಡಬಿದ್ರೆ ಜೈನ್‌ಪೇಟೆ ಕೋಟೆಬಾಗಿಲು ಮಮ್ಮು ಕುನ್ಹಿಯವರ ಪುತ್ರ ಮಹಮ್ಮದ್ ರಫೀಕ್(34) ಎಂದ ಗುರುತಿಸಲಾಗಿದೆ.
ಆರೋಪಿಗಳು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೋಡಿಂಬಾಡಿಯಲ್ಲಿರುವ ಅಡಿಕೆ ಗೋಡೌನ್‌ನಿಂದ ಜ.26 ರಂದು ರಾತ್ರಿ ಶಟರ್ ಮುರಿದು 33 ಗೋಣಿ ಚೀಲಗಳಲ್ಲಿ ತುಂಬಿಸಿದ್ದ ಸುಮಾರು ರೂ.5 ಲಕ್ಷ ಮೌಲ್ಯದ 2145 ಕೆ.ಜಿ. ಅಡಿಕೆಯನ್ನು ಕಳವು ಮಾಡಿದ್ದರು. ಘಟನೆಗೆ ಸಂಬಂಧಿಸಿ ಮ್ಹಾಲಕ ಮಹಮ್ಮದ್ ಶಭಾಯ್ ನೀಡಿದ ದೂರಿನಂತೆ ತನಿಖೆ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣವನ್ನು ಭೇದಿಸಿ ರೂ.5 ಲಕ್ಷ ಮೌಲ್ಯದ 2145 ಕೆ.ಜಿ. ಸುಲಿದ ಅಡಿಕೆ, ಸಾಗಾಟಕ್ಕೆ ಬಳಿಸಿದ್ದ ಅಶೋಕ್ ಲೈಲ್ಯಾಂಡ್ ಮಿನಿ ಟ್ರಕ್, ಮಾರುತಿ ರಿಟ್ಜ್ ಕಾರು ಹಾಗೂ ಬಜಾಜ್ ಪಲ್ಸರ್ ಬೈಕ್ ಮತ್ತು ದರೋಡೆಗೆ ಬಳಸಲಾಗುತ್ತಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.