ದೀಪಾವಳಿ ಹಬ್ಬ; ಪಟಾಕಿ ಮಾರಾಟ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 21. ಸ್ಪೋಟಕ ಕಾಯ್ದೆ ಮತ್ತು ನಿಯಮದಡಿ ಮೈದಾನದಲ್ಲಿ, ತೆರೆದ ಪ್ರದೇಶದಲ್ಲಿ ಹಬ್ಬಗಳ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವೀಕರಿಸಲಾಗುತ್ತಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಆಸಕ್ತ ಸಾರ್ವಜನಿಕರು ಅರ್ಜಿಯನ್ನು ಜಿಲ್ಲಾಧಿಕಾರಿಯವರ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.

ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ದೀಪಾವಳಿ ಹಬ್ಬದ ಸಂದರ್ಭ ಮತ್ತು ನವೆಂಬರ್ 12ರಿಂದ 13ರ ತುಳಸಿ ಪೂಜೆ ಸಂದರ್ಭದಲ್ಲಿ ಸುಡುಮದ್ದು ಮಾರಾಟ ತಾತ್ಕಾಲಿಕ ಪರವಾನಿಗೆ ಪಡೆಯಲು ಅವಕಾಶವಿದೆ.  ಪರವಾನಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 20. ನಂತರ ಬಂದ ಅರ್ಜಿಗಳನ್ನು ಕಡ್ಡಾಯವಾಗಿ ಕಚೇರಿಯಲ್ಲಿ ಸ್ವೀಕರಿಸಲಾಗುವುದಿಲ್ಲ.

ಅರ್ಜಿಯನ್ನು ನಿಗದಿತ ನಮೂನೆ ಎಂಇ-5 ರಲ್ಲಿ ಸಲ್ಲಿಸಬೇಕು.  ಅರ್ಜಿಯೊಂದಿಗೆ ತಾತ್ಕಾಲಿಕ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ (ರಸ್ತೆ ಕಟ್ಟಡ ಇತ್ಯಾದಿ ವಿವರ) ನೀಲಿ ನಕ್ಷೆ, ಅರ್ಜಿದಾರರ ಭಾವಚಿತ್ರ, ಪ್ರಸ್ತಾವಿತ ಜಮೀನಿನ ಪಹಣಿ, ಸರ್ಕಾರಿ ಜಮೀನು ಅಲ್ಲದೇ ಇದ್ದಲ್ಲಿ ಜಮೀನಿನ ಮಾಲೀಕರ ಒಪ್ಪಿಗೆ ಪತ್ರ, 20ರೂ. ಸ್ಟಾಂಪ್ ಪೇಪರ್‍ ನೊಂದಿಗೆ ಹಾಗೂ ಸರಕಾರಿ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಯ ಸುಪರ್ದಿಯಲ್ಲಿದೆಯೋ ಆ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ  ರೂ. 200/- ಪರಿಶೀಲನಾ ಶುಲ್ಕವನ್ನು ಹಾಗೂ ಪರವಾನಿಗೆ ಮಂಜೂರು ಮಾಡುವ ಸಂದರ್ಭದಲ್ಲಿ ರೂ. 500/- ಪರವಾನಿಗೆ ಶುಲ್ಕವನ್ನು ಪಾವತಿಸಬೇಕು. ಅರ್ಜಿದಾರರು ಕಚೇರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಇಲಾಖೆ, ಪೊಲೀಸ್, ತಹಶೀಲ್ದಾರರ ನಿರಾಕ್ಷೇಪಣಾ ಪತ್ರ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಹಾಗೂ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಬಂದಲ್ಲಿ ಸ್ಪೋಟಕ ಕಾಯಿದೆ/ನಿಯಮಾವಳಿಗಳಿಗೆ ಒಳಪಟ್ಟು ಕಚೇರಿಯಿಂದ ಪರವಾನಿಗೆ ಮಂಜೂರು ಮಾಡಲಾಗುತ್ತದೆ. ಕಡ್ಡಾಯವಾಗಿ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top