ಮಹಿಳೆಯರು ಸಣ್ಣ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ- ನ್ಯಾಯಾಧೀಶೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 21. ಆರೋಗ್ಯವಾಗಿರಲು ಪೌಷ್ಟಿಕ ಆಹಾರಗಳು ಅಗತ್ಯವಾಗಿದ್ದು, ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ಸರಿಯಲ್ಲ. ಸಣ್ಣ ಅರೋಗ್ಯ ಸಮಸ್ಯೆಗೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ ಹೇಳಿದರು. ಅವರು ಶುಕ್ರವಾರದಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ.ದ.ಕ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ನಗರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಷಣ ಅಭಿಯಾನ ಯೋಜನೆಯಡಿ ನಗರದ ರಾಜ್ಯ ಸರ್ಕಾರಿ ನೌಕರರ ಸಂಘ ಸಭಾವನದಲ್ಲಿ ನಡೆದ “ಪೋಷಣ ಮಾಸಾಚರಣೆ ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿದರು.


ಮಹಿಳೆಯರು ಆಹಾರವನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುವ ಮೂಲಕ ಆರೋಗ್ಯದಲ್ಲಿ ಸಮತೋಲನ ಆಯ್ದುಕೊಳ್ಳಬಹುದು. ಸರಕಾರದ ವತಿಯಿಂದ ಅಂಗನವಾಡಿಗಳಿಗೆ ನೀಡಲಾಗುವ ಪುಷ್ಠಿ ಆಹಾರವನ್ನು ಹೆಚ್ಚಾಗಿ ಬಳಕೆ ಮಾಡದೇ ಇರುವುದು ವಿಷಾದಕರ. ಪುಷ್ಟಿ ಆಹಾರ ಪೌಡರ್ ಬಹಳಷ್ಟು ಪೌಷ್ಟಿಕಾಂಶವನ್ನು ಹೊಂದಿದ್ದು ಅದರಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಉಪಯೋಗಿಸಬೇಕು ಎಂದರು. ಅಂಗನವಾಡಿಗಳಿಂದ ಜಿಲ್ಲೆಯಲ್ಲಿ ಉತ್ತಮ ರೀತಿಯ ಕೆಲಸಗಳಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರನ್ನು ಅವರು ಅಭಿನಂದಿಸಿದರು.

Also Read  ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರಿಂದ ಕುಕ್ಕೆ ಕಾಮಗಾರಿಗಳ ಪರಿಶೀಲನೆ ➤ ಭಕ್ತರ ಅನುಕೂಲಕ್ಕೆ ಪ್ರತ್ಯೇಕ ಸುತ್ತು ಪೌಳಿ ನಿರ್ಮಾಣಕ್ಕೆ ಯೋಜನೆ

ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಮಾತನಾಡಿ, ತಾಯಿ-ಮಗು ಮರಣ ಪ್ರಮಾಣ ಕಡಿಮೆಯಾಗಬೇಕಾದರೆ ತಾಯಿ ಮತ್ತು ಮಗುವಿಗೆ ಪೌಷ್ಟಿಕ ಆಹಾರದ ಅಗತ್ಯ ಇದೆ. ತಾಯಿಯು ಪೌಷ್ಟಿಕ ಆಹಾರವನ್ನು ಸೇವಿಸಿದಲ್ಲಿ ಅರೋಗ್ಯವಂತ ಮಗು ಜನನವಾಗಲಿದೆ ಎಂದರು.
ಮಗುವಿಗೆ ಎದೆ ಹಾಲನ್ನು ನೀಡಿದ ನಂತರ ಮಗುವಿನ ತೇಗು ತೆಗೆಯಬೇಕು ಇಲ್ಲದಿದ್ದರೆ ಹಾಲಿನೊಂದಿಗೆ ಗಾಳಿಯು ಮಗುವಿನ ಒಳಗೆ ಸೇರಿ ಮಗು ಮರಣ ಹೊಂದುವ ಸಾಧ್ಯತೆ ಇರುವುದರಿಂದ ಹಾಲುಣಿಸಿದ ಕೂಡಲೇ ತೇಗು ತೆಗೆಯಬೇಕು. ಮಗುವಿಗೆ ಹಾಲುಣಿಸುವ ಪ್ರಕ್ರಿಯೆಯಲ್ಲಿ ತಾಯಿ ಜಾಗರೂಕತೆಯಿಂದ ಸೂಕ್ಷ್ಮವಾಗಿ ಇರಬೇಕು ಎಂದರು.

error: Content is protected !!
Scroll to Top