ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಗ್ರಾಮ ಪಂಚಾಯತ್ ನಲ್ಲಿ ನೋಡಲ್ ಅಧಿಕಾರಿ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 19. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇನ್ನಷ್ಟು ಹೆಚ್ಚು ಫ‌ಲಾನುಭವಿಗಳಿಗೆ ಸಿಗುವಂತೆ ಮಾಡಲು ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆಯ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಪಡಿತರ ಚೀಟಿಗಳ ಆಧಾರದಲ್ಲಿ ಫ‌ಲಾನುಭವಿಗಳನ್ನು ಗುರುತಿಸಿ ಗುರಿ ನಿಗದಿಪಡಿಸಲಾಗಿತ್ತು. ದ.ಕ. ಜಿಲ್ಲೆಯಲ್ಲಿ ಹೀಗೆ ಗುರುತಿಸಲಾದ ಒಟ್ಟು 4,03,333 ಮಹಿಳೆಯರಲ್ಲಿ ಶೇ.92ರಷ್ಟು ಮಂದಿಗೆ (3,69,292) 2,000 ರೂ. ತಲುಪುತ್ತಿದೆ. ಶೇ.100ರಷ್ಟು ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದ.ಕ. ಜಿಲ್ಲೆ ಸಹಿತ ಕೆಲವು ಜಿಲ್ಲೆಗಳಲ್ಲಿ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲೇ ಖಾತೆಗೆ ಜಮೆ ಮಾಡಲಾಗುವುದು. ವಿವಿಧ ರೀತಿಯ ಸಾಲ ಪಡೆದುಕೊಂಡವರು ಆದಾಯ ತೆರಿಗೆ ಪಾವತಿದಾರರು ಎಂದು ಆನ್‌ಲೈನ್‌ನಲ್ಲಿ ನಮೂದಾಗುತ್ತಿದ್ದು, ಇದರಿಂದ ಅನೇಕರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಅಲ್ಲದೇ ಅನ್ನಭಾಗ್ಯ ಯೋಜನೆಯಲ್ಲಿ ಅನೇಕ ಹಿರಿಯ ನಾಗರಿಕರ ಬೆರಳಚ್ಚು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಂಥವರ ರೆಟಿನಾ ಸ್ಕ್ಯಾನ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ನೋಡಲ್‌ ಅಧಿಕಾರಿ ಹಾಗೂ ಜಿ.ಪಂ. ಸಿಇಒ ಡಾ| ಆನಂದ್‌, ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್‌ ಮುಂಡೋಡಿ ಉಪಸ್ಥಿತರಿದ್ದರು.

Also Read  How to Install Wi-Fi Signal Boosters

error: Content is protected !!
Scroll to Top