(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.05. ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯು ನೂತನವಾಗಿ ಆರಂಭಗೊಂಡಿದ್ದು, ಕೆಎ-70 ಸಂಖ್ಯೆಯಲ್ಲಿ ಇನ್ನು ಮುಂದೆ ವಾಹನಗಳು ರಸ್ತೆಗಿಳಿಯಲಿವೆ.
ಬಂಟ್ವಾಳ ತಾಲೂಕಿನ ಮೇಲ್ಕಾರ್ ನಲ್ಲಿರುವ ಬಿರ್ವ ಟವರ್ಸ್ ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಚೇರಿಯನ್ನು ಶನಿವಾರದಂದು ಚಾಲನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರ್.ಟಿ.ಓ. ಕಚೇರಿಯ ಸ್ವಂತ ಕಟ್ಟಡಕ್ಕೆ ನಿವೇಶನ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಜನರ ಹಿತ ಕಾಪಾಡುವ ಕೆಲಸಗಳು ಇಂದು ಆಗಬೇಕಿದ್ದು, ಆರ್.ಟಿ.ಒ. ಕಚೇರಿಯಲ್ಲಿ ಸುಸಜ್ಜಿತ ವ್ಯವಸ್ಥೆ ಮತ್ತು ಪೂರ್ಣಕಾಲಿಕ ಸಿಬ್ಬಂದಿ ಕಾರ್ಯಾಚರಿಸುತ್ತಿದ್ದಾರೆ ಎಂದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ರೊಡ್ರಿಗಸ್, ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಕಟ್ಟಡ ಮಾಲೀಕ, ತಾಪಂ ಸದಸ್ಯ ಸಂಜೀವ ಪೂಜಾರಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ರಾಜವರ್ಮ ಬಲ್ಲಾಳ್, ಸಾರಿಗೆ ಮತ್ತು ರಸ್ತೆ ಸುರಕ್ಷತ ಆಯುಕ್ತ ಬಿ.ದಯಾನಂದ, ಜಂಟಿ ಸಾರಿಗೆ ಆಯುಕ್ತೆ ಎಂ. ಪಿ. ಓಂಕಾರೇಶ್ವರಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ, ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಬಿ.ಶಿವರಾಜ ಪಾಟೀಲ ಉಪಸ್ಥಿತರಿದ್ದರು.
ಸಾರಿಗೆ ಆಯುಕ್ತರಾದ ಬಿ.ದಯಾನಂದ ಅವರು ಪ್ರಸ್ತಾವಿಸಿ, ಸ್ವಾಗತಿಸಿದರು. ಎ.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಸಾಂಕೇತಿಕವಾಗಿ ಸ್ಮಾಟ್೯ ಕಾರ್ಡ್ ಪರವಾನಿಗೆ, ಆರ್.ಸಿ.ಯನ್ನು ವಿತರಿಸಲಾಯಿತು.