(ನ್ಯೂಸ್ ಕಡಬ) newskadaba.com ಕಡಬ, ಮಾ.01. ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂ.ಗೆ ಕಾಂಪೋಸ್ಟ್ ಪೈಪ್ ಪೂರೈಕೆ ಮಾಡಿದ ವೇಳೆ ನಕಲಿ ಬಿಲ್ ಸೃಷ್ಟಿಸಿ ವಂಚನೆಗೈದ ಆರೋಪದ ಹಿನ್ನೆಲೆಯಲ್ಲಿ ಐತ್ತೂರು ಗ್ರಾಮದ ಅಂತಿಬೆಟ್ಟು ನಿವಾಸಿ ಎ.ಆರ್.ರೋಹಿತ್ (30) ನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಸಂಜೆ ಕಡಬದಲ್ಲಿ ಬಂಧಿಸಿದ್ದಾರೆ.
2015-16ನೇ ಸಾಲಿನಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯಡಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಗ್ರಾ.ಪಂ.ಮಾಜಿ ಸದಸ್ಯ ಕ್ಸೇವಿಯರ್ ಬೇಬಿ ಅವರ ದೂರಿನ ಹಿನ್ನೆಲೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಜಾನಕಿ ಹಾಗೂ ಪೈಪ್ ಖರೀದಿ ನಡೆಸಿದ ವೇಳೆ ಕರ್ತವ್ಯದಲ್ಲಿದ್ದ ಪ್ರಭಾರ ಪಿಡಿಒ ವಸಂತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ತನಿಖೆ ನಡೆಸಿದಾಗ ಆರೋಪಿ ಎ.ಆರ್.ರೋಹಿತ್ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಮಾತ್ರವಲ್ಲದೇ ಪೆರಾಬೆ, ಕೊಯಿಲ, ಆರ್ಯಾಪು, ಕೋಡಿಂಬಾಡಿ, ಉಬರಡ್ಕ ಮಿತ್ತೂರು, ಜಾಲ್ಸೂರು ಸೇರಿದಂತೆ ಹಲವು ಗ್ರಾಮ ಪಂಚಾಯತ್ ಗಳಿಗೆ ಲಕ್ಷಾಂತರ ರೂ. ವಂಚನೆಗೈದಿರುವುದು ಬೆಳಕಿಗೆ ಬಂದಿತ್ತು. ಬಳಿಕ ಆತನ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆರೋಪಿಯು ಬುಧವಾರ ಸಂಜೆ ಕಡಬದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಎಸಿಬಿ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಅವರು ಸಿಬಂದಿಗಳಾದ ರಾಧಾಕೃಷ್ಣ, ಹರಿಪ್ರಸಾದ್, ಪ್ರಶಾಂತ್ ಹಾಗೂ ಗಣೇಶ್ ಅವರ ಸಹಕಾರದೊಂದಿಗೆ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 2015 -16ನೇ ಸಾಲಿನಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯಡಿ ಪೈಪ್ ಕಾಂಪೋಸ್ಟ್ ಘಟಕ ಆರಂಭಿಸಲು ಸಿಮೆಂಟ್ ಕಾಂಪೋಸ್ಟ್ ಪೈಪ್ ಖರೀದಿಸಬೇಕೆಂದು ಜಿ.ಪಂ.ನಿಂದ ಗ್ರಾ.ಪಂ.ಗೆ ಸುತ್ತೋಲೆ ಬಂದಿತ್ತು. ಅದೇ ಸಂದರ್ಭದಲ್ಲಿ ಜಿ.ಪಂ. ನೆರವು ಘಟಕದ ಸಂಯೋಜಕಿ ಮಂಜುಳಾ ಹಾಗೂ ಸಮಾಲೋಚಕ ಎ.ಆರ್.ರೋಹಿತ್ ಅವರು ಮೈಸೂರಿನ ಪಿ.ಜಿ.ಟ್ರೇಡರ್ಸ್ ಎನ್ನುವ ಸಂಸ್ಥೆಯ ಬಿಲ್ ನೀಡಿ ಸಿಮೆಂಟ್ ಕಾಂಪೋಸ್ಟ್ ಪೈಪ್ ಗಳನ್ನು ಸರಬರಾಜು ಮಾಡಿದ್ದರು ಎನ್ನಲಾಗಿದೆ. ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅನಂತರ ನಡೆದ ಗ್ರಾಮಸಭೆಯಲ್ಲಿ ಕ್ಸೇವಿಯರ್ ಬೇಬಿ ಹಾಗೂ ಇತರರು ಆರೋಪಿಸಿದ್ದರು. ಸದ್ರಿ ವಿಚಾರ ಬಳಿಕ ನಡೆದ ಗ್ರಾ.ಪಂ. ಸಾಮಾನ್ಯಸಭೆಯಲ್ಲಿ ಚರ್ಚೆಯಾಗಿ ಪೈಪ್ ಸರಬರಾಜು ಮಾಡಿದ್ದರೆನ್ನಲಾದ ಎ.ಆರ್.ರೋಹಿತ್ ಅವರು ಹೆಚ್ಚುವರಿಯಾಗಿ ಪಡೆದಿದ್ದರೆನ್ನಲಾದ ರೂ. 13 ಸಾವಿರವನ್ನು ಅವರಿಂದಲೇ ಗ್ರಾ.ಪಂ.ಖಾತೆಗೆ ಕಟ್ಟಿಸಲಾಗಿತ್ತು. ಮುಂದಿನ ಬೆಳವಣಿಗೆಯಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಅಸ್ತಿತ್ವದಲ್ಲಿ ಇಲ್ಲದ ಅಂಗಡಿಯ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ, ಪೈಪ್ ಗಳಿಗೆ ನೈಜ ದರಕ್ಕಿಂತ ಹೆಚ್ಚು ಹಣ ನೀಡಲಾಗಿದೆ ಎಂದು ಕ್ಸೇವಿಯರ್ ಬೇಬಿ ಅವರು ಎಸಿಬಿಗೆ ದೂರು ನೀಡಿದ್ದರು. ಆ ಬಳಿಕ ಅವ್ಯವಹಾರದ ದೂರಿನ ಹಿನ್ನೆಲೆಯಲ್ಲಿ ಎ.ಆರ್.ರೋಹಿತ್ ನನ್ನು ಜಿ.ಪಂ.ನ ನೆರವು ಘಟಕದ ಸಮಾಲೋಚಕ ಹುದ್ದೆಯಿಂದ ವಜಾ ಮಾಡಲಾಗಿತ್ತು.