ಕೊಕ್ಕಡ: ಜಾತಿನಿಂದನೆ ಆರೋಪ – ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 03. ಮಳೆ ಬಂದ ಕಾರಣ ಅಂಗಡಿಯ ಜಗಲಿಯಲ್ಲಿ ಕುಳಿತಿದ್ದ ದಲಿತ ವೃದ್ದನ ಮೇಲೆ ಅಂಗಡಿ ಮಾಲೀಕನೋರ್ವ ಜಾತಿ ನಿಂದನೆ ಮಾಡಿ ಮರದ ತುಂಡಿನಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಹಲ್ಲೆಗೆ ಒಳಗಾದವರನ್ನು ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಎಂದು ಗುರುತಿಸಲಾಗಿದೆ. ಕೊಕ್ಕಡ ನಿವಾಸಿಯಾಗಿರುವ ರಾಮಣ್ಣ ಗೌಡ ಎಂಬವರೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ.

 

ಘಟನೆಯ ವಿವರ- ಕೊಕ್ಕಡ ಪೇಟೆಗೆ ಹೋಗಿದ್ದ ಮಂಚ ಮೊಗೇರ ಅವರು ಮನೆಗೆ ಹಿಂತಿರುಗುವ ವೇಳೆ ಮಳೆ‌ ಬಂದಿದ್ದರಿಂದ ಪಕ್ಕದ ಅಂಗಡಿಯೊಂದರ ಜಗಲಿಯಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿದ್ದ ಅಂಗಡಿ ಮಾಲಿಕ ರಾಮಣ್ಣ ಗೌಡ, ಯಾಕೆ ಅಂಗಡಿ ಜಗಲಿಯಲ್ಲಿ ಕುಳಿತಿದ್ದಿಯಾ ಎಂದು ಪ್ರಶ್ನಿಸಿದ್ದು ಸುಸ್ತಾದ ಕಾರಣಕ್ಕೆ ಕುಳಿತಿದ್ದೇನೆ. ಮಳೆ‌ ಬಿಟ್ಟ ಕೂಡಲೇ ಹೋಗುತ್ತೇನೆ ಎಂದು ಹೇಳಿದ್ದಾಗಿಯೂ ಈ ವೇಳೆ ಅಂಗಡಿಯ ಒಳಗೆ ಹೋದ ರಾಮಣ್ಣ ಗೌಡ ಮರದ ರೀಪಿನೊಂದಿಗೆ ಬಂದು ಜಾತಿ ನಿಂದನೆ ಮಾಡಿ ತಲೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾನೆ ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಗೊಳಗಾದ ಮಂಚ ಮೊಗೇರ ಅವರನ್ನು ಮನೆಯವರು ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!

Join WhatsApp Group

WhatsApp Share