(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಮಂಗಳೂರು ತಾಲೂಕು ಇದರ ಕಾರ್ಯಕಾರಿ ಸಮಿತಿ ಸಭೆಯು ಮಂಗಳೂರಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆಯಿತು. ಮಂಗಳೂರು ತಾಲೂಕು ವಿಭಜನೆಯಾಗಿ ಉಳ್ಳಾಲ, ಮುಲ್ಕಿ ಮತ್ತು ಮೂಡುಬಿದರೆ ತಾಲೂಕುಗಳಾಗಿ ವಿಭಜನೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ನೂತನವಾಗಿ ತಾಲೂಕುವಾರು ಕೃಷಿಕ ಸಮಾಜದ ರಚನೆ ಆಗುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯ ಅಧ್ಯಕತೆಯನ್ನು ಮಂಗಳೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಗಡೆ ವಹಿಸಿದ್ದರು.
ಸಭೆಯಲ್ಲಿ ಪಶುಸಂಗೋಪನ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ಕೃಷಿ ಕೇಂದ್ರ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಎಲ್ಲಾ ಇಲಾಖೆಗಳ ಕೃಷಿಕರಿಗೆ ಸಿಗುವ ಸವಲತ್ತುಗಳ ಪ್ರಗತಿಯ ಬಗ್ಗೆ ಪರಿಶೀಲಿಸಲಾಯಿತು. ಅತಿವೃಷ್ಟಿಯಿಂದ ಭತ್ತ, ಕಾಳು, ಮೆಣಸು, ಅಡಿಕೆ ಬೆಳೆಗಳ ನಷ್ಟ ಭರಿಸಿ ಪರಿಹಾರ ಮೊತ್ತ ಕೊಡಿಸುವಂತೆ ಸರಕಾರಕ್ಕೆ ಗಮನ ಸೆಳೆಯಲು ನಿರ್ಣಯಿಸಲಾಯಿತು. ಕೃಷಿಕರ ಬೆಳೆ ಸಮೀಕ್ಷೆಯನ್ನು ತುರ್ತುಗೊಳಿಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕೃಷಿಕ ಸಭೆಯ ಅಧ್ಯಕ್ಷ ಎಸ್.ಬಿ.ಸಂಪತ್ ಸಾಮ್ರಾಜ್ಯ ಹಾಗೂ ಕೃಷಿಕ ಸಮಾಜದ ಸದಸ್ಯರು ಭಾಗವಹಿಸಿದ್ದರು. ಪದನಿಮಿತ್ತ ಕಾರ್ಯದರ್ಶಿ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ವೀಣಾ.ಕೆ.ಆರ್ ಸ್ವಾಗತಿಸಿದರು.