(ನ್ಯೂಸ್ ಕಡಬ) newskadaba.com ನವದೆಹಲಿ, ಆ. 31. ಹರಿಯಾಣದ ಶಂಭು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ 200ನೇ ದಿನ ತಲುಪಿದ್ದು, ಪ್ರತಿಭಟನಾ ಸ್ಥಳಕ್ಕೆ ಕುಸ್ತಿಪಟು ವಿನೇಶ್ ಫೋಗಟ್ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳನ್ನು ಬೆಂಬಲಿಸಿದ ಅವರು ಅನ್ನದಾತರ ಕುಂದುಕೊರತೆಗಳನ್ನು ಆಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ರೈತರ ಹೋರಾಟ ಬೆಂಬಲಿಸಿ ಮಾತನಾಡಿದ ಅವರು, ರೈತರು ಇಲ್ಲಿ ಕುಳಿತು 200 ದಿನಗಳು ಕಳೆದಿವೆ. ಈ ದೇಶದ ಪ್ರಜೆಗಳಾಗಿರುವ ರೈತರು ದೇಶವನ್ನು ನಡೆಸುತ್ತಾರೆ. ಅವರು ದೇಶಕ್ಕೆ ಅನ್ನ ನೀಡದಿದ್ದರೆ ಕ್ರೀಡಾಪಟುಗಳು ಮಾತ್ರವಲ್ಲ, ಯಾರು ಏನೂ ಮಾಡಲು ಸಾಧ್ಯವಿಲ್ಲ. ನಾವು ದೊಡ್ಡ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತೇವೆ. ಆದರೆ ನಮ್ಮ ಕುಟುಂಬ ದುಃಖದಲ್ಲಿರುವುದು ನೋಡಿದಾಗ ನಾವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದರು. ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.