(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಗೃಹರಕ್ಷಕರ ಅಧಿಕಾರಿಗಳ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ವಿಜೇತರಾಗಿರುವ ಶ್ರೀ ಸಂತೋಷ್ ಸಲ್ಡಾನ ಅವರನ್ನು ಗೃಹರಕ್ಷಕದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ ಚೂಂತಾರು ಅವರು ಮೇರಿಹಿಲ್ ನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುರವರು ಮಾತನಾಡಿ, ರಾಜ್ಯಮಟ್ಟದ ತರಬೇತಿಯಲ್ಲಿ ಒಟ್ಟು 31 ಜಿಲ್ಲೆಗಳ 62 ಗೃಹರಕ್ಷಕರು ಭಾಗವಹಿಸಿದ್ದು, ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದ ಉಳ್ಳಾಲ ಘಟಕದ ಗೃಹರಕ್ಷಕ ಶ್ರೀ ಸಂತೋಷ್ ಸಲ್ಡಾನ ಇವರು ನಮ್ಮ ಜಿಲ್ಲೆಗೆ ಹೆಮ್ಮೆಯನ್ನು ತಂದುಕೊಟ್ಟಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 15 ಘಟಕಗಳ ಗೃಹರಕ್ಷಕರಿಗೆ ಮುಂದಿನ ತರಬೇತಿಗಳಲ್ಲಿ ಭಾಗವಹಿಸಲು ಇವರ ಸಾಧನೆಯು ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
01-04-2010 ರಂದು ಗೃಹರಕ್ಷಕದಳ ಸದಸ್ಯತ್ವಕ್ಕೆ ಸೇರ್ಪಡೆಯಾಗಿರುವ ಸಂತೋಷ್ ಸಲ್ಡಾನ ಅವರು ನಿಷ್ಕಾಮ ಸೇವೆಯನ್ನು ಸಲ್ಲಿಸಿಕೊಂಡು ಬಂದಿರುತ್ತಾರೆ. ಇವರು ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ 29-07-2024 ರಿಂದ 23-08-2024 ರವರೆಗೆ 26 ದಿನಗಳು ನಡೆದ ಗೃಹರಕ್ಷಕರ “ಅಧಿಕಾರಿಗಳ ತರಬೇತಿ”ಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ವಿಜೇತರಾಗಿರುತ್ತಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ. ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಚಿನ್ನದ ಪದಕ ವಿಜೇತರನ್ನು ಉದ್ದೇಶಿಸಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯನ್ನು ತಂದಿರುವುದಕ್ಕೆ ಅಭಿನಂದಿಸಿದರು ಹಾಗೂ ಜಿಲ್ಲೆಯ ಎಲ್ಲಾ ಗೃಹರಕ್ಷಕರಿಗೆ ಬೆಂಗಳೂರಿನಲ್ಲಿ ಮತ್ತು ದಾವಣಗೆರೆಯಲ್ಲಿ ನಡೆಯುವ ತರಬೇತಿಗಳಲ್ಲಿ ಭಾಗವಹಿಸಿ ಇನ್ನೂ ಹೆಚ್ಚಿನ ಹೆಸರು ಗಳಿಸುವಲ್ಲಿ ಮಾದರಿಯಾಗಿದ್ದೀರಿ ಎಂದು ನುಡಿದರು.
ಮಂಗಳೂರು ಘಟಕದ ಸಾರ್ಜಂಟ್ ಶ್ರೀ ಸುನಿಲ್ ಕುಮಾರ್ ಇವರು ವಂದನಾರ್ಪಣೆಗೈದರು. ಕಛೇರಿ ಸಿಬ್ಬಂದಿ ಶ್ರೀಮತಿ ಮಂಜುಳಾ, ಉಪ್ಪಿನಂಗಡಿ ಘಟಕದ ಹಿರಿಯ ಗೃಹರಕ್ಷಕ ಶ್ರೀ ಅಣ್ಣು ಬಿ., ಗೃಹರಕ್ಷಕರಾದ ಧನಂಜಯ್, ರಾಜೇಶ್ ಗಟ್ಟಿ, ನವೀನ್ ಕುಮಾರ್, ಸಂತೋಷ್ ಜಾದವ್, ಚಂದ್ರಶೇಖರ್, ಸಂಜಯ್ ಶೆಣೈ, ಗೃಹರಕ್ಷಕಿಯರಾದ ಸುರೇಖಾ, ವನಿತಾ, ಸುಲೋಚನಾ, ನಿಶಾ ಹಾಗೂ ಉಪ್ಪಿನಂಗಡಿ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.