(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಇವರಿಬ್ಬರ ವಿರುದ್ದದ ಎರಡು ಪ್ರತ್ಯೇಕ ಪ್ರಕರಣಗಳ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮೂಡಾ ಹಗರಣದ ಬಗ್ಗೆ ತನಿಖೆಗೆ ಆದೇಶಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಅವರ ಕ್ರಮ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಅಭಯ ನೀಡಿದೆ. ಇದರ ಜೊತೆಗೆ ರಾಜ್ಯಪಾಲರ ವಿರುದ್ಧ ಸಂಘರ್ಷಕ್ಕಿಳಿದ ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೂ ಮುಂದಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮಕ್ಕೆ ಸಂಬಂಧಿಸಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತು ತೀರ್ಮಾನ ಇಂದು ಪ್ರಕಟವಾಗಲಿದೆ.
ಅತ್ತ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಕಾಯ್ದಿರಿಸಿದ ತೀರ್ಪು ಕೂಡಾ ಇಂದೇ ಪ್ರಕಟವಾಗಲಿದೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ಸಿಬಿಐಗೆ ಅನುಮತಿ ನೀಡಿದ್ದ ಆದೇಶವನ್ನು ಕಾಂಗ್ರೆಸ್ ನೇತೃತ್ವದ ಈಗಿನ ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿ ದಾಖಲಾಗಿರುವ ಎರಡು ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿರುವ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಕಾಯ್ದಿರಿಸಿರುವ ತೀರ್ಪನ್ನು ಇಂದು ಪ್ರಕಟಿಸಲಿದೆ.