(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 28. ಅರಣ್ಯ ಒತ್ತುವರಿ ತೆರವು ಒಂದು ಕಾನೂನು ಪ್ರಕ್ರಿಯೆ. ದೊಡ್ಡ ಅರಣ್ಯ ಮತ್ತು 2015ರ ನಂತರ ಅರಣ್ಯ ಒತ್ತುವರಿಯಾದ ಜಾಗವನ್ನು ಮಾತ್ರ ತೆರವು ಮಾಡಿಸಲಾಗುತ್ತದೆ. ಕಾಡಂಚಿನ ಮುಗ್ದ ಕೃಷಿಕರು ನಾಗರೀಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಹಿತಿ ನೀಡಿರುವ ಅವರು, ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವರು ಅರಣ್ಯ ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸರ್ಕಾರ ಬಡವರ ಭೂಮಿಯ ಒತ್ತುವರಿ ತೆರವು ಮಾಡೋದಿಲ್ಲ. ಕೇವಲ ದೊಡ್ಡ ಅರಣ್ಯ ಒತ್ತುವರಿ ಮಾಡಿರುವ ಮತ್ತು 2015ರ ನಂತರ ಒತ್ತುವರಿಯನ್ನು ಮಾಡಿರೋದನ್ನು ತೆರವು ಮಾಡಲು ಸೂಚಿಸಿರುವ ಬಗ್ಗೆ ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ 2015ಕ್ಕೆ ಮೊದಲು ಜೀವನೋಪಾಯಕ್ಕಾಗಿ ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಅರಣ್ಯವನ್ನು ಕೃಷಿಗಾಗಿ ಒತ್ತುವರಿ ಮಾಡಿಕೊಂಡಿರುವವರಿಗೆ ಯಾವುದೇ ತೊಂದರೆ ನೀಡದಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
ಶಿರೂರಿನಲ್ಲಿ ಗುಡ್ಡ ಕುಸಿತ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಂತ ಘಟನೆಗಳು ಪರಿಸರ ಸಂರಕ್ಷಣೆಗೆ ಎಚ್ಚರಿಕೆಯ ಗಂಟೆಗಳು. ನದಿಗಳ ಮೂಲ ಮತ್ತು ಜೀವ ವೈವಿಧ್ಯ ತಾಣ ಪಶ್ಚಿಮ ಘಟ್ಟ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಅವರು ಒತ್ತಿ ಹೇಳಿದ್ದಾರೆ. ಸಮಾಜ ಪರಿವರ್ತನಾ ಸಮುದಾಯ ಮತ್ತು ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಖ್ಯೆ ಡಬ್ಲ್ಯುಪಿ.ನಂ. 15511-14/ 2013 ಮತ್ತು ಡಬ್ಲ್ಯು.ಪಿ. ನಂ. 15500/2013ರಲ್ಲಿ ಕರ್ನಾಟಕ ಹೈಕೋರ್ಟ್ ಅರಣ್ಯ ಒತ್ತುವರಿ ತೆರವಿಗೆ ಆದೇಶ ನೀಡಿದೆ ಎಂದು ಸಚಿವರು ಮಾಹಿತಿ ನೀಡಿದರು.