(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಆ. 24. ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಲೈಸನ್ಸ್ ಅಮಾನತ್ತುಗೊಳಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸದಾಗಿ ಚಾಲನಾ ಪತ್ರ ಪಡೆಯಲು ಬರುವ ಚಾಲಕರಿಗೆ ಒಂದು ಗಂಟೆಗಳ ಕಾಲ ತರಬೇತಿ ನೀಡಲಾಗುತ್ತಿದೆ. ಚಾಲನಾ ಪತ್ರದ ಮಹತ್ವ, ಹೆಲ್ಮೆಟ್ ಧರಿಸಿ ಚಾಲನೆ ಮಾಡುವುದು, ವಾಹನವನ್ನು ವಿಮೆಗೆ ಒಳಪಡಿಸುವುದು ಸೇರಿದಂತೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ ನಂತರ ಪರೀಕ್ಷೆ ತೆಗೆದುಕೊಂಡ ನಂತರ ಪರವಾನಿಗ ಪತ್ರ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು. ಕಳೆದ ಎಪ್ರೀಲ್‍ನಿಂದ ಜುಲೈ ವರೆಗೆ ಪೊಲೀಸ್ ಮತ್ತು ನ್ಯಾಯಾಲದಿಂದ ಬಂದಿರುವ 147 ಚಾಲನಾ ಅನುಜ್ಞಾಪನಾ ಪತ್ರಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ 130ನ್ನು ಅಮಾನತ್ತು ಗೊಳಿಸಲಾಗಿದೆ. ಬಾಕಿ 17 ಪ್ರಕರಣಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಅಪಘಾತ ಉಂಟು ಮಾಡಿ ಪ್ರಕರಣದ ದಾಖಲು ಆದಲ್ಲಿ ಅಂತವರ ಚಾಲನಾ ಲೈಸೆನ್ಸ್ ರದ್ದರಿಗೆ ಕ್ರಮವಹಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.