(ನ್ಯೂಸ್ ಕಡಬ) newskadaba.com ಕಡಬ, ಫೆ.23. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯೊಳಗೆ ನುಗ್ಗಿರುವ ಕಳ್ಳರು ಲಕ್ಷಾಂತರ ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ಠಾಣಾ ವ್ಯಾಪ್ತಿಯ ಕೇಪು ಎಂಬಲ್ಲಿ ಶುಕ್ರವಾರದಂದು ಬೆಳಕಿಗೆ ಬಂದಿದೆ.
ಕುಟ್ರುಪ್ಪಾಡಿ ಗ್ರಾಮದ ಕೇಪು ನಿವಾಸಿ ಹಾರೂನ್ ಸಾಹೇಬ್ ಹಾಗೂ ಅವರ ಮನೆಯವರು ನೀರಿನ ಅಭಾವ ವಿದ್ದುದರಿಂದ ಸುಮಾರು ಹನ್ನೆರಡು ದಿನಗಳಿಂದ ಕೆರ್ಮಾಯಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಕೇಪು ಮನೆಯಲ್ಲಿ ಕಳೆದ ಕೆಲ ದಿನಗಳಿಂದ ಯಾರೂ ಇಲ್ಲದೆ ಇದ್ದುದನ್ನು ಅರಿತ ಕಳ್ಳರು ಮನೆಯೊಳಗಿನ ಕಪಾಟಿನಲ್ಲಿಟ್ಟಿದ್ದ ಎರಡು ಚಿನ್ನದ ಸರ, ಐದು ಚಿನ್ನದ ಉಂಗುರ, ಮೂರು ಚಿನ್ನದ ಬೆಂಡೋಲೆ, 45,000 ಸಾವಿರ ರೂ. ನಗದನ್ನು ದೋಚಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗುರುವಾರದಂದು ನೆಕ್ಕಿತ್ತಡ್ಕದಲ್ಲಿ ಉರೂಸ್ ಸಮಾರಂಭವಿದ್ದ ಕಾರಣ ನೆರೆಮನೆಯವರೆಲ್ಲ ಅಲ್ಲಿಗೆ ತೆರಳಿರುವ ಬಗ್ಗೆ ಅರಿತವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್, ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಗಳು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.