ಐವನ್ ಡಿಸೋಜಾ ವಿರುದ್ದ ಯುವಮೋರ್ಚಾದಿಂದ ಪೊಲೀಸರಿಗೆ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ದೇಶದ ಸಮಗ್ರತೆಗೆ ಧಕ್ಕೆಯಾಗುವಂತೆ ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಮೋರ್ಚಾದ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರಿನ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯ ವೇಳೆ ಐವನ್ ಡಿ ಸೋಜ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುವ ವೇಳೆ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿ, ಕಾಂಗ್ರೆಸ್ ಕಾರ್ಯಕರ್ತರಿಗೆ ದಂಗೆ ಏಳುವಂತೆ ಮಾಡಿದ್ದಾರೆ. ಸಾರ್ವಜನಿಕ ಸೊತ್ತಿಗೂ ಹಾನಿಯನ್ನುಂಟು ಮಾಡಲು ಕಾರಣರಾಗಿದ್ದಾರೆ. ರಾಜ್ಯಪಾಲರನ್ನು ರಾಷ್ಟ್ರಪತಿ ಹಿಂದಕ್ಕೆ ಕರೆಸಬೇಕು. ಬಾಂಗ್ಲಾದೇಶದ ಅಧ್ಯಕ್ಷರು ರಾತ್ರೋರಾತ್ರಿ ಓಡಿ ಹೋದಂತೆ ಇಲ್ಲಿಯೂ ರಾಜ್ಯಪಾಲರು ರಾತ್ರೋರಾತ್ರಿ ಓಡಿ ಹೋಗುವಂತೆ ಮಾಡುತ್ತೇವೆ ಎಂದು ಐವನ್ ಡಿಸೋಜ ಹೇಳಿಕೆ ನೀಡಿರುವುದಾಗಿ ಆರೋಪಿಸಲಾಗಿದೆ.

ದೇಶ ಮತ್ತು ಸಂವಿಧಾನ ವಿರುದ್ಧ ಹೇಳಿಕೆ ನೀಡಿರುವ ಐವನ್ ಡಿಸೋಜಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 152ರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸೂಕ್ತ ಕಲಂನಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಂದನ್ ಮಲ್ಯ ಆಗ್ರಹಿಸಿದ್ದಾರೆ.

error: Content is protected !!

Join the Group

Join WhatsApp Group