(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 12. ಪ್ರತೀ ದಿನವೂ ವಿವಿಧ ರೀತಿಯ ಮದ್ಯ ಸೇವನೆ ಬಯಸುವ ಜನರಿಗೆ ಇದೀಗ ಹೊಸ ರೀತಿಯ ರುಚಿ ನೋಡುವ ಅವಕಾಶ ಸಿಕ್ಕಿದೆ. ಅದೇನೆಂದರೆ ಬೆಲ್ಲದಿಂದ ತಯಾರಿಸಲಾದ ಮೊದಲ ದೇಶೀಯ ರಮ್ ಸದ್ಯದಲ್ಲೇ ಮಾರುಕಟ್ಟೆಗೆ ಕಾಲಿಡಲಿದ್ದು, ಮದ್ಯಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಅದೂ ಕೂಡಾ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನವೇ ಈ ಹೊಸ ಮದ್ಯದ ಬ್ರ್ಯಾಂಡ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬೆಲ್ಲದಿಂದ ತಯಾರಿಸಿದ ಮದ್ಯ ಇದು ಎನ್ನುವುದೇ ಇದರ ವಿಶೇಷ.
ಇನ್ನು ಈ ‘ಹುಲಿ’ ಹೆಸರಿನ ರಮ್ ಮೈಸೂರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗುತ್ತಿದ್ದು, ಬರೋಬ್ಬರಿ 8 ವರ್ಷಗಳ ಕಠಿಣ ಪರಿಶ್ರಮದ ಬಳಿಕ ಇದೀಗ ಕನ್ನಡ ಹೆಸರಿನ ಮದ್ಯ ಮಾರುಕಟ್ಟೆಗೆ ಬಿಡುಗಡೆಯಾಗಲು ಸಜ್ಜಾಗಿದೆ.
750ಎಂಎಲ್ ಬಾಟಲಿಯು 630 ರೂಪಾಯಿ ಮೂಲ ಬೆಲೆಯನ್ನು ಹೊಂದಿದೆ. ಅಬಕಾರಿ ಸುಂಕ ಮತ್ತು ಚಿಲ್ಲರೆ ಮಾರ್ಜಿನ್‌ಗಳ ಕಾರಣ ಜನರಿಗೆ 2,800 ರೂಪಾಯಿಗೆ ಲಭ್ಯವಿರುತ್ತದೆ.
ಮೈಸೂರಿನ ನಂಜನಗೂಡು ತಾಲೂಕಿನಲ್ಲಿರುವ ಭಾರತದ ಮೊದಲ ಮೈಕ್ರೋ-ಡಿಸ್ಟಿಲರಿಯಲ್ಲಿ ಇದನ್ನ ತಯಾರಿಸಲಾಗುತ್ತದೆ. ಸುಮಾರು 2,000 ಬಾಟಲಿಗಳನ್ನು ಒಳಗೊಂಡಿರುವ ಮೊದಲ ಬ್ಯಾಚ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಈ ರಮ್ ಮೊದಲು ಬೆಂಗಳೂರು ಮತ್ತು ಮೈಸೂರು ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.