(ನ್ಯೂಸ್ ಕಡಬ) newskadaba.com ಕಡಬ, ಫೆ.17. ಕಳೆದ ಕೆಲವು ದಿನಗಳಿಂದ ಬಲ್ಯ ಗ್ರಾಮದ ಪರಂಕಾಜೆ ಎಂಬಲ್ಲಿ ನಡೆಯುತ್ತಿರುವ ಚಿತ್ರೀಕರಣ ತಂಡಕ್ಕೆ ಇದೀಗ ಸಂಕಷ್ಟ ಎದುರಾಗಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಬಲ್ಯ ಗ್ರಾಮದ ವ್ಯಾಪ್ತಿಯ ಪರಂಕಾಜೆ ಎಂಬಲ್ಲಿ ಪಂಚಾಯತ್ ನಿಂದ ಯಾವುದೇ ಪರವಾನಿಗೆ ಪಡೆಯದೆ ಚಿತ್ರೀಕರಣ ಮಾಡುತ್ತಿರುವುದಲ್ಲದೆ, ಬೀದಿಯಲ್ಲಿ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಎಸೆದಿದ್ದಾರೆ ಎಂದು ಆರೋಪಿಸಿ ಚೆನ್ನೈನ ಗೋಕುಲಂ ಮೂವೀಸ್ ನ ಪ್ರೊಡಕ್ಷನ್ ಮ್ಯಾನೇಜರ್ ಟೋನಿ ಟೋಮ್ ವಿರುದ್ಧ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನ ವತಿಯಿಂದ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇವರ ತಂಡವು ಕಳೆದ ಹಲವು ದಿನಗಳಿಂದ ಪಂಚಾಯತ್ ನಿಂದ ಯಾವುದೇ ರೀತಿಯ ಪರವಾನಿಗೆಯನ್ನು ಪಡೆಯದೆ ಅನಧಿಕೃತವಾಗಿ ಚಿತ್ರೀಕರಣ ನಡೆಸುತ್ತಿದೆ ಮತ್ತು ಬೀದಿಗಳಲ್ಲಿ ತ್ಯಾಜ್ಯಗಳನ್ನು ಎಸೆದು ಸಾರ್ವಜನಿಕ ಆಸ್ತಿಗಳ ಮೇಲೆ ಹಾನಿಯನ್ನು ಉಂಟು ಮಾಡಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಕಡಬ ಠಾಣೆಗೆ ದೂರು ನೀಡಿದ್ದಾರೆ.