ಕಡಬ: ಸಿಡಿಲು ಬಡಿದು ಓರ್ವ ಮೃತ್ಯು, ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಮೇ.11. ತಾಲೂಕಿನಾದ್ಯಂತ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಉತ್ತರ ಪ್ರದೇಶ ಮೂಲದ ಓರ್ವ ಕಾರ್ಮಿಕ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಠಾಣಾ ವ್ಯಾಪ್ತಿಯ ಇಚಿಲಂಪಾಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತ ಕಾರ್ಮಿಕನನ್ನು ಉತ್ತರ ಪ್ರದೇಶದ ಚೈನ್‌ಪುರ್ ನಿವಾಸಿ ದೂದ್ ನಾಥ್ ಎಂಬವರ ಪುತ್ರ ಶ್ರೀಕಿಸುನ್(56) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಬಿಹಾರ ಮೂಲದ ಗೌರಿ ಚೌದರಿ(45), ಮಹಾದೇವ್(30) ಎಂದು ಗುರುತಿಸಲಾಗಿದೆ. ಇಚಿಲಂಪಾಡಿಯ ಕುರಿಯಾಳ ಕೊಪ್ಪ ಎಂಬಲ್ಲಿ ಮೂವರು ಕಾರ್ಮಿಕರು ಎಂದಿನಂತೆ ಮರಳು ತೆಗೆದು ಶೆಡ್ ನಲ್ಲಿ ಕುಳಿತಿದ್ದ ವೇಳೆ ಸಿಡಿಲು ಬಡಿದಿದೆ. ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ದು ಆ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಕಡಬ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆ: ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕಡಬದಿಂದ ಸುಳ್ಯ ಸಂಪರ್ಕ ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.

ಸುಬ್ರಹ್ಮಣ್ಯ, ಕಡಬ, ಇಚಿಲಂಪಾಡಿ, ಪಂಜ, ಆತೂರು ಮೊದಲಾದೆಡೆ ಭಾರೀ ಗಾಳಿ ಮಳೆಯಾಗಿದ್ದು, ಕಡಬ – ಪಂಜ ರಸ್ತೆಯ ಪುಳಿಕುಕ್ಕು ರಸ್ತೆಯಲ್ಲಿ ಬೃಹತ್ ಮರ ಬಿದ್ದ ಪರಿಣಾಮ ರಸ್ತೆ ಸಂಚಾರದಲ್ಲಿ ತಡೆಯುಂಟಾಗಿತ್ತು. ಬದಲಿ ಮಾರ್ಗವಾಗಿರುವ ಎಡಮಂಗಲ – ನಿಂತಿಕಲ್ಲು ಮಾರ್ಗದಲ್ಲೂ ಬೃಹತ್ ಮರ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಕಡಬ – ಸುಳ್ಯ ಸಂಪರ್ಕ ಕಡಿತಗೊಂಡಿತ್ತು. ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮರ್ಧಾಳ ಪೇಟೆಯ ಸಮೀಪ ಬೃಹತ್ ಗಾತ್ರದ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರದ ಒಂದು ಪಾರ್ಶ್ವ ಹೊತ್ತಿ ಉರಿದಿದೆ.

error: Content is protected !!

Join the Group

Join WhatsApp Group