(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.10. ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯ ತಾಲೂಕಿನ ಪೈಚಾರು ನಿವಾಸಿ ಮುಸ್ತಫಾ ಸೇರಿದಂತೆ ಮೂವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸಕಲೇಶಪುರದಲ್ಲಿ ಬಂಧಿಸಿದ ಬಗ್ಗೆ ವರದಿಯಾಗಿದೆ.
ಸಕಲೇಶಪುರದ ಆನೆಮಹಲ್ ಎಂಬಲ್ಲಿ ಸಿರಾಜ್ ಎಂಬಾತನ ಕಾಫಿ ಎಸ್ಟೇಟ್ ನಲ್ಲಿ ಮುಸ್ತಫಾ ಕೆಲಸಕ್ಕೆ ಸೇರಿದ್ದು, ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಮುಸ್ತಫಾನಿಗೆ ಆಶ್ರಯ ನೀಡಿದ್ದ ಸಿರಾಜ್ ಮತ್ತು ಇಲ್ಯಾಸ್ ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಮುಸ್ತಫಾನ ಬಗ್ಗೆ ಎನ್‌ಐಎ ಲುಕ್ ಔಟ್ ನೋಟೀಸ್ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.