ಕಡಬ: ಇನ್ಮುಂದೆ ಸಂಜೆ ವೇಳೆಗೆ ಉಪ್ಪಿನಂಗಡಿ ಕಡೆಗೆ ತೆರಳುವವರಿಗೆ ಸಂತಸದ ಸುದ್ದಿ – ಹೊಸದಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ

ಕಡಬ, ಮೇ.09. ತಾಲೂಕು ಕೇಂದ್ರ ಕಡಬದಿಂದ ಸಂಜೆ ವೇಳೆ 6 ಗಂಟೆಯ ಬಳಿಕ ಉಪ್ಪಿನಂಗಡಿ ಕಡೆಗೆ ತೆರಳುವವರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಿಸಬೇಕೆನ್ನುವ ಸಾರ್ವಜನಿಕರ ಬೇಡಿಕೆ ಕೊನೆಗೂ ಈಡೇರಿದೆ.

ಇದೀಗ ಸಂಜೆ 7 ಗಂಟೆಗೆ ಕಡಬದಿಂದ ಉಪ್ಪಿನಂಗಡಿಗೆ ಹೊಸದಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಿಸಿದ್ದು, ರಾತ್ರಿ 7.50ಕ್ಕೆ ಉಪ್ಪಿನಂಗಡಿಗೆ ತಲುಪಲಿದೆ‌. ಇದುವರೆಗೆ ಸಂಜೆ 6 ಗಂಟೆಯ ಬಳಿಕ ಕಡಬದಿಂದ ಉಪ್ಪಿನಂಗಡಿಯತ್ತ ಕೆಸ್ಸಾರ್ಟಿಸಿ ಬಸ್ ಸಂಚಾರ ಇರಲಿಲ್ಲ. ಅದರಿಂದಾಗಿ ಸಂಜೆ ತಡವಾಗಿ ಉಪ್ಪಿನಂಗಡಿಯತ್ತ ಪ್ರಯಾಣಿಸಬೇಕಾದ ಕೂಲಿ ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಯಾವುದೇ ಸರ್ವಿಸ್ ವಾಹನಗಳು ಸಂಜೆಯ ಬಳಿಕ ಉಪ್ಪಿನಂಗಡಿಯತ್ತ ಸಂಚರಿಸಲು ಸಿಗದೇ ಇದ್ದುದರಿಂದ ಅನಿವಾರ್ಯವಾಗಿ ಜನರು ದುಬಾರಿ ಬಾಡಿಗೆ ನೀಡಿ ವಾಹನಗಳನ್ನು ಗೊತ್ತುಪಡಿಸಿಕೊಂಡು ಸಂಚರಿಸಬೇಕಾಗಿತ್ತು. ಈ ಬಗ್ಗೆ ಹಲವು ಬಾರಿ ಮಾಧ್ಯಮಗಳು ವರದಿ ಮಾಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದವು.

Also Read  ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ಮರು ಡಾಮರೀಕರಣ ► ನಬಾರ್ಡ್‌ನಿಂದ 49 ಲಕ್ಷ ರೂ.ಬಿಡುಗಡೆ

ಹೊಸದಾಗಿ ಪ್ರಯಾಣ ಆರಂಭಿಸಿರುವ ಬಸ್ ಪುತ್ತೂರಿನಿಂದ ಶಾಂತಿಮೊಗರು ಮೂಲಕ ಕಡಬಕ್ಕೆ ತಲುಪಿ ಸಂಜೆ 7 ಗಂಟೆಗೆ ಕಡಬದಿಂದ ಉಪ್ಪಿನಂಗಡಿಯತ್ತ ಸಂಚರಿಸಿ ರಾತ್ರಿ 7.50 ರ ಸುಮಾರಿಗೆ ಉಪ್ಪಿನಂಗಡಿ ತಲುಪಿ ರಾತ್ರಿ ಅಲ್ಲಿಯೇ ನಿಲುಗಡೆಯಾಗಲಿದೆ. ಅದೇ ಅಲ್ಲಿಂದ ಸಮಯಕ್ಕೆ ಪುತ್ತೂರಿಗೆ ಸಂಚರಿಸುವ ಬಸ್ ಇರುವುದರಿಂದ ಸಂಜೆ ತಡವಾಗಿ ಕಡಬ ಭಾಗದಿಂದ ಪುತ್ತೂರಿಗೆ ಹೋಗಬೇಕಾದವರಿಗೂ ಅನುಕೂಲವಾಗಲಿದೆ.

error: Content is protected !!
Scroll to Top